ಬೆಂಗಳೂರು: ಉತ್ತರ ತಾಲೂಕಿನ ಭವಾನಿನಗರದಲ್ಲಿ ವಿದ್ಯಾರ್ಥಿಯೊಬ್ಬನು ತಂದೆಯ ಗನ್ ನಿಂದ ತನ್ನ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಬಿಇ ಪ್ರಥಮ ವರ್ಷದ ವಿದ್ಯಾರ್ಥಿ ವಿಶು ಉತ್ತಪ್ಪ (19). ಅವರು ಮೂಲತಃ ಕೊಡಗಿನವರು. ತಂದೆ ತಮ್ಮಯ್ಯ ಎಂಬವರು ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದು, ಕಳೆದ 15 ವರ್ಷದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರದಲ್ಲಿ ಕುಟುಂಬ ಸಹಿತ ವಾಸವಿದ್ದರು.
ವಿಶು ಉತ್ತಪ್ಪ ಅವರು ತಂದೆ ರೇಷನ್ ತರಲು ಹೋದ ಸಮಯದಲ್ಲಿ ತಂದೆಯ ಗನ್‌ನಿಂದಲೇ ಫೈಯರ್ ಮಾಡಿಕೊಂಡು ನಂತರದಲ್ಲಿ ತಂದೆಗೆ ಕರೆ ಮಾಡಿದ್ದಾನೆ. ನಾನಿನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದರಿಂದ ಗಾಬರಿಗೊಂಡ ತಂದೆ ಮನೆಗೆ ದೌಡಾಯಿಸಿ ಬಂದು ನೋಡಿದಾಗ ವಿಶು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ ಎನ್ನಲಾಗಿದೆ.
ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.


