ಉಡುಪಿ: ಇಲ್ಲಿನ ಪ್ರಸಾದ್ ನೇತ್ರಾಲಯ ವೈದ್ಯರು ವೃದ್ಧೆಯೊಬ್ಬರ ಕಣ್ಣಿನಿಂದ 9 ಸೆ.ಮೀ, ಉದ್ದದ ಜೀವಂತ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ತೀವ್ರವಾದ ಕಣ್ಣು ನೋವಿನಿಂದ ಬಳಲುತ್ತಿದ್ದ 70 ವರ್ಷದ ವೃದ್ಧೆಯ ಕಣ್ಣಿನಿಂದ ವೈದ್ಯರಾದ ಕೃಷ್ಣ ಪ್ರಸಾದ್, ಡಾ. ಅಪರ್ಣಾ ನಾಯಕ್ ಮತ್ತು ಅವರ ತಂಡ ತುರ್ತು ಚಿಕಿತ್ಸೆ ನಡೆಸಿ ಈ ಹುಳ ಹೊರ ತೆಗೆದಿದ್ದಾರೆ.
ತೀವ್ರ ಕಣ್ಣು ನೋವಿನಿಂದ ಬಳಲುತ್ತಿದ್ದ ವೃದ್ಧೆ, ಜೂ 1 ರಂದು ಮಂಗಳವಾರ ಬೆಳಗ್ಗೆ ಪ್ರಸಾದ ನೇತ್ರಾಲಯಕ್ಕೆ ಭೇಟಿ ನೀಡಿದ್ದರು. ವಿಪರೀತ ಎಡ ಕಣ್ಣುನೋವಿನ ಬಗ್ಗೆ ವೈದ್ಯರ ಬಳಿ ಹೇಳಿದ್ದರು. ಈ ವೇಳೆ ಪರೀಕ್ಷಿಸಿದ ವೈದ್ಯ ಕೃಷಪ್ರಸಾದ್ ಜೀವಂತ ಹುಳು ಅಕ್ಷಿಪಟಲದ ಸುತ್ತು ತಿರುಗುತ್ತಲೇ ಇರುವುದನ್ನು ಗಮನಿಸಿದ್ದಾರೆ. ತಡ ಮಾಡಿದರೆ ಈ ಹುಳು ಮೆದುಳು ಪ್ರವೇಶಿಸಿದರೆ ಮತ್ತಷ್ಟು ಅಪಾಯವೆಂದು ಅರಿತ ಡಾ. ಕೃಷ್ಣಪ್ರನಾದ್ ಮತ್ತು ಅವರ ಸಹ ವೈದ್ಯರಾದ ಡಾ. ಅಪರ್ಣಾ ನಾಯಕ್ ಇವರನ್ನೊಳಗೊಂಡ ತಂಡ ನೇತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಿತು, ಹುಳವನ್ನು ತಕ್ಷಣ ನಿಷ್ಕ್ರಿಯಗೊಳಿಸಲು ಔಷಧಿಯನ್ನು ನೀಡಲಾಯಿತು. ಇದರ ಪರಿಣಾಮವೋ ಏನೋ ಎಡಗಣ್ಣಿನಲ್ಲಿದ್ದ ಹುಳು ಕಾಣದಾಯಿತು. ಕಣ್ಣು ನೋವು ಮಾಯವಾಯಿತು. ಅಲ್ಲದೇ ಹುಳ ಸತ್ತಿರಬಹುದು ಎಂದು ಅಂದಾಜಿಸಲಾಯಿತು. ಇದರಿಂದ ತುಸು ನೆಮ್ಮದಿ ಪಡೆದ ವೃದ್ಧೆ ಮನೆಗೆ ತೆರಳಿದರು ಮತ್ತು 3 ದಿನಗಳ ಬಳಿಕ ಕಣ್ಣಿನಲ್ಲಿ ಯಾವುದೇ ತೊಂದರೆಯು ಇಲ್ಲ ಎಂದು ತಿಳಿಸಿದ್ದರು.
ಆದರೆ ಭಾನುವಾರ ಸಾಯಂಕಾಲ ಇವರಿಗೆ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ಮನೆಯವರು ಕೂಡ ಕಣ್ಣಿನಲ್ಲಿ ಹುಳ ಇರೋದನ್ನು ನೋಡಿದ್ದಾರೆ. ಇದರಿಂದ ಭಯಭೀತರಾದ ಕುಟುಂಬದವರು ಪ್ರಸಾದ ನೇತ್ರಾಲಯಕ್ಕೆ ಮತ್ತೆ ಆಗಮಿಸಿದ್ದಾರೆ. ಕೂಡಲೇ ಸ್ಪಂದಿಸಿದ ಡಾ. ಕೃಷ್ಣಪ್ರಸಾದ್ ತಂಡ ತಡ ಮಾಡದೆ, ಹೊರ ರೋಗಿ ವಿಭಾಗದಲ್ಲಿಯೇ ತುರ್ತು ಚಿಕಿತ್ಸೆ ನೀಡಿದ್ದಾರೆ. ಆಶ್ಚರ್ಯವೆಂಬಂತೆ ಸುಮಾರು 9 . ಮೀ. ಉದ್ದದ ಜೀವಂತ ಹುಳುವನ್ನು ಹೊರ ತೆಗೆದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯ ಡಾ. ಕೃಷ್ಣಪ್ರಸಾದ್ ” 26 ವರ್ಷಗಳ ಅನುಭವದಲ್ಲಿ ಒಮ್ಮೆ ರೆಟಿನಾ ಹಿಂದಿನಿಂದ ಹಾಗೂ ಕಣ್ಣಿನ ಕುಣಿಕೆಯಿಂದ ಹದಿನೈದು ವರ್ಷಗಳ ಹಿಂದೆ ವಿಭಿನ್ನ ರೀತಿಯ ಹುಳವನ್ನು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದ್ದಿದ್ದವು. ಆದರೆ ಭಾನುವಾರ ಹೊರತೆಗೆದ ಹುಳು ನೇತ್ರದ ಹೊರಪದರದಿಂದ ಹೊರತೆಗೆದ ಪ್ರಥಮ ಹುಳುವಾಗಿದೆ ಈ ಹುಳದ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಅಲ್ಲಿಂದ ಮಾಹಿತಿ ಬರಬೇಕಾಗಿದೆ” ಎಂದು ತಿಳಿಸಿದ್ದಾರೆ.


