ಕೊರೊನಾ ವೈರಸ್ ಸೋಂಕು ಆತಂಕ ಜನರನ್ನು ಮನೆಯೊಳಗೇ ಇರುವಂತೆ ಮಾಡಿದೆ. ಇದರ ಪರಿಣಾಮ ಆನ್‌ಲೈನ್ ಮೂಲಕ ವಸ್ತುಗಳು, ತಿಂಡಿ-ತಿನಿಸುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಪೂರೈಕೆಗೂ ಸಿಬ್ಬಂದಿ ಕಾರ್ಯನಿರ್ವಹಿಸಲೇ ಬೇಕಲ್ಲವೇ? ಆನ್‌ಲೈನ್ ಬೇಡಿಕೆಗೆ ತಕ್ಕಂತೆ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಅನುವಾಗಲು ಅಮೆಜಾನ್ 75,000 ಜನರನ್ನು ಉದ್ಯೋಗಕ್ಕೆ ಆಹ್ವಾನಿಸುತ್ತಿದೆ.
ಅಮೆರಿಕ ಸೇರಿದಂತೆ ಹಲವು ಭಾಗಗಳಲ್ಲಿ ಕೊರೊನಾ ಭೀತಿಯಿಂದಾಗಿ ಅಂಗಡಿಗಳು ಇರುವ ಸಂಗ್ರಹಗಳನ್ನು ಖಾಲಿ ಮಾಡಿ, ದೀರ್ಘಾವಧಿಯವರೆಗೆ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿವೆ. ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಸಿಗುವಂತೆ ಮಾಡಲು ಇ-ಕಾಮರ್ಸ್ ಕಂಪನಿಗಳು ಪ್ರಯತ್ನಿಸುತ್ತಿವೆ. ವಸ್ತುಗಳ ಸಂಗ್ರಹ ಕೇಂದ್ರಗಳು, ಮನೆಗಳಿಗೆ ಪೂರೈಕೆ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲು ಹೆಚ್ಚುವರಿಯಾಗಿ ಸುಮಾರು 75 ಸಾವಿರ ಸಿಬ್ಬಂದಿ ಅಗತ್ಯವಿರುವುದಾಗಿ ಅಮೆಜಾನ್ ಹೇಳಿದೆ.
ಪ್ರಸ್ತುತ ಅಮೆಜಾನ್‌ನಲ್ಲಿ 7,98,000ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.