Friday, June 27, 2025
Homeತಾಜಾ ಸುದ್ದಿದ್ವಿತೀಯ ಪಿಯು ಪರೀಕ್ಷೆ ಈ ಬಾರಿ ಇನ್ನಷ್ಟು ಕಠಿಣ!; ಮಂಡಳಿಯಿಂದ 3 ನೀಲನಕ್ಷೆ ಪ್ರಕಟಣೆ

ದ್ವಿತೀಯ ಪಿಯು ಪರೀಕ್ಷೆ ಈ ಬಾರಿ ಇನ್ನಷ್ಟು ಕಠಿಣ!; ಮಂಡಳಿಯಿಂದ 3 ನೀಲನಕ್ಷೆ ಪ್ರಕಟಣೆ

spot_img
- Advertisement -
- Advertisement -

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯು ಹಿಂದಿನ ವರ್ಷಗಳ ಅಂತಿಮ ಪರೀಕ್ಷೆಗಳಿಗಿಂತ ಕಠಿಣವಾಗಿರಲಿದ್ದು, ಈ ಕುರಿತಂತೆ ಪರೀಕ್ಷಾ ಮಂಡಳಿಯು 3 ನೀಲನಕ್ಷೆಯನ್ನು ಪ್ರಕಟಿಸಿದೆ.

ಕಳೆದ ವರ್ಷ ಒಟ್ಟು ಅಂಕಗಳಲ್ಲಿ ಶೇ. 10 ಕಠಿಣ ಪ್ರಶ್ನೆಗಳಿಗೆ ಮೀಸಲಿರಿಸಲಾಗಿತ್ತು. ಆದರೆ ಈ ಬಾರಿ ಹಲವು ವಿಷಯಗಳಲ್ಲಿ ಕಠಿಣತೆಯ ಮಟ್ಟ ಶೇ. 40 ಮೀರಲಿದೆ. ಹಾಗೆಯೇ 2 ಮತ್ತು 3 ಅಂಕ, 4 ಮತ್ತು 5 ಅಂಕಗಳ ಪ್ರಶ್ನೆಗಳಲ್ಲಿ ಪರಸ್ಪರ ಬದಲಾವಣೆ, ಆಯ್ಕೆಯಲ್ಲಿ ಕಡಿತ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿ ಗೊಂದಲ ಮುಕ್ತವಾಗಿ ಪರೀಕ್ಷೆ ನಡೆಸುವ ಇರಾದೆಯೊಂದಿಗೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಕಳೆದ ವರ್ಷ ಮೊದಲ ಬಾರಿಗೆ 3 ವಾರ್ಷಿಕ ಪರೀಕ್ಷೆ ಪದ್ಧತಿ ಅಳವಡಿಸಿದ್ದು ಮಾತ್ರವಲ್ಲದೆ, ಎಲ್ಲ ವಿಷಯಗಳಿಗೂ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನೀಡುವ ಪದ್ಧತಿ ಆರಂಭಿಸಲಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಪರೀಕ್ಷೆಯನ್ನು ಗೊಂದಲ ಮುಕ್ತವಾಗಿ ನಡೆಸುವ ಸಲುವಾಗಿ ಮಧ್ಯವಾರ್ಷಿಕ ಪರೀಕ್ಷೆಗೆ ಮುಂಚಿತವಾಗಿಯೇ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ 3 ಮಾದರಿಗಳನ್ನು ಮತ್ತು ಪ್ರಶ್ನೆ ಕೇಳಲು ಅನುಸರಿಸಬೇಕಾದ ಮಾನದಂಡ, ಪ್ರಶ್ನೆಪತ್ರಿಕೆಯ ಕಠಿನತೆಯ ಮಟ್ಟದ ಬಗ್ಗೆ ನೀಲನಕ್ಷೆ ಹೊರಡಿಸಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಪ್ರತೀ ವಿಷಯ, ಪ್ರತೀ ಮಾದರಿಗೂ ಪ್ರತ್ಯೇಕ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಅದೇ ರೀತಿ ಪ್ರತೀ ವಿಷಯಕ್ಕೂ ಪ್ರಶ್ನೆಗಳ ಕಠಿನತೆಯ ಪ್ರಮಾಣವನ್ನು ಭಿನ್ನವಾಗಿ ನಿಗದಿ ಮಾಡಿದೆ.

ಪ್ರಶ್ನೆಪತ್ರಿಕೆಯ ನೀಲನಕ್ಷೆಯಲ್ಲೇ ಪ್ರಶ್ನೆಗಳ ಸ್ವರೂಪದ ಕುರಿತ ವಿಚಾರ ಹೀಗಿದೆ; ವಿದ್ಯಾರ್ಥಿಗಳ ಸ್ಮರಣೆ ಮತ್ತು ಗ್ರಹಿಕೆ (ಲೋವರ್‌ ಆರ್ಡರ್‌ ಥಿಂಕಿಂಗ್‌ ಸ್ಕಿಲ್ಸ್‌ -ಲಾಟ್ಸ್‌)ಯನ್ನು ಆಧರಿಸಿ ಸುಲಭ ಪ್ರಶ್ನೆಗಳನ್ನು ಕೇಳಬೇಕು ಎಂದು ಹೇಳಲಾಗಿದೆ. ಎಲ್ಲ ಪ್ರಶ್ನೆಪತ್ರಿಕೆಗಳಲ್ಲಿಯೂ ಲಾಟ್ಸ್‌ ಆಧಾರದಲ್ಲಿ ಕೇಳುವ ಪ್ರಶ್ನೆಗಳು ಮತ್ತು ನಿಗದಿಪಡಿಸಿರುವ ಅಂಕಕ್ಕೆ ಸಿಂಹಪಾಲಿದೆ. ಆದರೆ ಅನ್ವಯ, ವಿಶ್ಲೇಷಣೆ, ಮೌಲ್ಯಮಾಪನ ಮತ್ತು ಸೃಜನಾತ್ಮಕತೆ (ಹೈಯರ್‌ ಆರ್ಡರ್‌ ಥಿಂಕಿಂಗ್‌ ಸ್ಕಿಲ್ಸ್‌- ಹಾಟ್ಸ್‌) ಬಯಸುವ ಪ್ರಶ್ನೆ ಮತ್ತು ಅಂಕಗಳ ಪ್ರಮಾಣವನ್ನು ಈ ಬಾರಿ ಹೆಚ್ಚಿಸಲಾಗಿದೆ. ಉದಾಹರಣೆಗೆ, ಈ ಬಾರಿಯ ದ್ವಿತೀಯ ಪಿಯುವಿನ ಕನ್ನಡದ ಒಂದು ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಲಾಟ್ಸ್‌ಗೆ ಶೇ. 72.5 ಅಂಕ ನಿಗದಿಯಾಗಿದ್ದರೆ, ಹಾಟ್ಸ್‌ಗೆ ಶೇ. 27.5 ಅಂಕ ನಿಗದಿಯಾಗಿದೆ. ಆಂಗ್ಲ ಭಾಷೆ, ಸಮಾಜಶಾಸ್ತ್ರ, ಗಣಿತ, ಭೌತಶಾಸ್ತ್ರದಲ್ಲಿ ಶೇ. 40 ಸುಲಭ, ಶೇ. 40 ಸಾಧಾರಣ ಮತ್ತು ಶೇ. 20 ಕಠಿನ ಪ್ರಶ್ನೆಗಳನ್ನು ಕೇಳಲು ಸೂಚಿಸಲಾಗಿದೆ. ರಾಜ್ಯದ ದ್ವಿತೀಯ ಪಿಯುವಿನಲ್ಲಿರುವ ಒಟ್ಟು 36 ವಿಷಯಗಳಿಗೂ ಲಾಟ್ಸ್‌ ಮತ್ತು ಹಾಟ್ಸ್‌ಗೆ ಅಂಕಗಳನ್ನು ನಿಗದಿ ಪಡಿಸಲಾಗಿದೆ. 3 ಮಾದರಿಯಲ್ಲಿ ಲಾಟ್ಸ್‌ ಮತ್ತು ಹಾಟ್ಸ್‌ಗೆ ನಿಗದಿ ಪಡಿಸಿರುವ ಅಂಕಗಳಲ್ಲಿ ಅಲ್ಪ ಮಟ್ಟಿನ ವ್ಯತ್ಯಾಸವಿದ್ದರೂ ಒಟ್ಟಾರೆಯಾಗಿ ಅಂಕಗಳ ಹಂಚಿಕೆ ಪ್ರಮಾಣ ಅಸುಪಾಸಿನಲ್ಲೇ ಇದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಬಾರಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುತ್ತಿದ್ದು, ಮಕ್ಕಳಿಗೆ ಮಾದರಿ ಪ್ರಶ್ನೆಪತ್ರಿಕೆಯ ಪರಿಚಯವಾಗಲಿದೆ. ಜತೆಗೆ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪರಿಹಾರ ಬೋಧನೆ ಚಟುವಟಿಕೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಪಠ್ಯ ಪೂರ್ಣಗೊಳಿಸಿ ಪುನರ್ಮನನ ಚಟುವಟಿಕೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿರುವುದರಿಂದ ಪ್ರಶ್ನೆಪತ್ರಿಕೆ ತುಸು ಕಠಿನವಾಗಿದ್ದರೂ ಮಕ್ಕಳಿಗೆ ಸಮಸ್ಯೆ ಆಗಲಾರದು ಎಂಬ ವಿಶ್ವಾಸದಲ್ಲಿ ಇಲಾಖೆಯ ಅಧಿಕಾರಿಗಳಿದ್ದಾರೆ.

- Advertisement -
spot_img

Latest News

error: Content is protected !!