ಮುಂಬೈ: ವರುಣನ ಆರ್ಭಟಕ್ಕೆ ದೇಶದ ವಾಣಿಜ್ಯ ನಗರಿ ಮುಂಬೈ ಅಕ್ಷರಶಃ ನಲುಗಿದ್ದು,ಧಾರಾಕಾರ ಮಳೆಗೆ ಗೋಡೆ ಕುಸಿದು 11 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಚೆಂಬೂರಿನ ಭಾರತಿ ನಗರ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕಾಂಪೌಂಡ್ ಗೋಡೆ ಕುಸಿದಿದ್ದು, ಗೋಡೆ ಅಲ್ಲಿದ್ದ ಗುಡಿಸಲುಗಳು ಮೇಲೆ ಬಿದ್ದಿದೆ.ಈ ವೇಳೆ ಅಲ್ಲಿದ್ದ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 5 ಗುಡಿಸಲುಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. ಸುಮಾರು 8ಕ್ಕೂ ಅಧಿಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಭಾರಿ ಮಳೆಯಿಂದ ರಕ್ಷಣಾ ಕಾರ್ಯ ವಿಳಂಬವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ ಡಿ ಆರ್ ಎಫ್) ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಪ್ರಯಾಸಪಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.


ಭಾರಿ ಮಳೆಯಿಂದಾಗಿ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವೆಡೆ ಭೂಕುಸಿತವಾಗಿ, ಜನಜೀವನ ಅಸ್ತವ್ಯಸ್ಥಗೊಂಡಿದೆ. ಪ್ರವಾಹ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಮನೆ ಬಿಟ್ಟು ಹೊರಬಾರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.