ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಕಾರಣದಿಂದಾಗಿ ಇದೀಗ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ, ಹಿಂದಿನ ಶೈಕ್ಷಣಿಕ ದಾಖಲೆಗಳ ಆಧಾರದಲ್ಲಿ ಮುಂದಿನ ತರಗತಿಗೆ ಪಾಸ್ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಇದರ ಜೊತೆಗೆ ಮುಂದಿನ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.
ಒಂದರಿಂದ ಏಳನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೇ 1ರಿಂದ ಜೂನ್ 6ರವರೆಗೆ ಬೇಸಿಗೆ ರಜೆ ಎಂದು ಘೋಷಿಸಲಾಗಿದೆ. ಜೂನ್ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಹಾಗೆಯೇ, ಎಂಟು ಮತ್ತು ಒಂಬತ್ತನೇ ತರಗತಿಯ ಮಕ್ಕಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ಇದೆ. ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.
ಆದರೆ, ಈ ವೇಳಾಪಟ್ಟಿ ಕೇವಲ ತಾತ್ಕಾಲಿಕವಾಗಿದ್ದು, ಕೋವಿಡ್ ಸೋಂಕಿನ ಸ್ಥಿತಿಗತಿ ಅನುಸಾರ ಬದಲಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಶಿಕ್ಷಣ ಇಲಾಖೆ, ಜೂನ್ 21ರಿಂದ ಜುಲೈ 5ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.