ಅಹಮದಾಬಾದ್: 70 ವರ್ಷಗಳಿಂದ ನೀರು, ಆಹಾರವಿಲ್ಲದೆ ಬದುಕಿದ್ದ ಪ್ರಹ್ಲಾದ್ ಜಾನಿ ಅಲಿಯಾಸ್ ಚುನರೀವಾಲಾ ಮಾತಾಜಿ ಇಂದು ಗುಜರಾತಿನ ಗಾಂಧೀನಗರ್ ಜಿಲ್ಲೆಯ ಚರದಾ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಶಿಷ್ಯರು ತಿಳಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಪ್ರಹ್ಲಾದ್ ಜಾನಿಯವರಿಗೆ ಗುಜರಾತಿನಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ.ಆಹಾರ ಅಥವಾ ನೀರು ಇಲ್ಲದೆ ಬದುಕುತ್ತಿರುವುದು ಹೇಗೆ ಎಂಬುದರ ಬಗ್ಗೆ 2003 ಮತ್ತು 2010ರಲ್ಲಿ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದರು. ತನಗೆ ದೈವ ಬಲ ಇರುವ ಕಾರಣ ಅನ್ನ ಅಥವಾ ನೀರು ಯಾವುದೂ ಬೇಡ ಎಂದು ಪ್ರಹ್ಲಾದ್ ಜಾನಿ ಹೇಳಿದ್ದರು.

ಪ್ರಹ್ಲಾದ್ ಜಾನಿ ಅವರು ಓರ್ವ ಧರ್ಮನಿಷ್ಠನಾಗಿ ಅಂಬಾ ದೇವತೆಯನ್ನು ಹೆಚ್ಚು ನಂಬುತ್ತಿದ್ದರು. ಹೀಗಾಗಿಯೇ ಅವರು ಮಹಿಳೆಯರ ರೀತಿ ಕೆಂಪು ಸೀರೆಯನ್ನು ಉಡುತ್ತಿದ್ದರು. ಇದರಿಂದಲೇ ಚುನ್ರಿವಾಲಾ ಮಾತಾಜಿ ಎಂದು ಪ್ರಸಿದ್ಧಿಯನ್ನು ಪಡೆದಿದ್ದರು.
ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಇದ್ದುದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಪ್ರಹ್ಲಾದ್ ಜಾನಿ ಮನೆ ಬಿಟ್ಟು ಹೋಗಿ ಭಕ್ತಿ-ಜ್ಞಾನದಲ್ಲಿ ಹೆಚ್ಚು ತೊಡಗಿಸಿಕೊಂಡರು. ಹಿಂದೊಮ್ಮೆ ಆಹಾರ ಮತ್ತು ನೀರು ಇಲ್ಲದೇ ನಾನು ಬದುಕ್ಕಿದ್ದೇ ಎಂದು ಹೇಳಿಕೊಂಡಿದ್ದರು. ದೇವರು ನನ್ನಲ್ಲಿ ನಿರಂತರವಾಗಿ ಉಳಿದಿರುವುದರಿಂದ ನನಗೆ ಆಹಾರವಾಗಲಿ ಅಥವಾ ನೀರಾಗಲಿ ಬೇಕಾಗಿಲ್ಲ ಎನ್ನುತ್ತಿದ್ದರು. 14ನೇ ವಯಸ್ಸಿನಲ್ಲೇ ಆಹಾರ ಮತ್ತು ನೀರು ಸೇವಿಸುವುದನ್ನು ಬಿಟ್ಟಿದ್ದರು ಎಂದು ಶಿಷ್ಯರು ಸಹ ಹೇಳಿದ್ದಾರೆ.