Wednesday, May 1, 2024
Homeತಾಜಾ ಸುದ್ದಿಯಕ್ಷಗಾನ ಕಲಾಪ್ರಿಯರ ಹೊಗಳಿಕೆಗೆ ಪಾತ್ರವಾಗಿರುವ ಯಕ್ಷಕನ್ಯೆ ದಿವ್ಯಶ್ರೀ ಕಕ್ಕೆಪದವು..

ಯಕ್ಷಗಾನ ಕಲಾಪ್ರಿಯರ ಹೊಗಳಿಕೆಗೆ ಪಾತ್ರವಾಗಿರುವ ಯಕ್ಷಕನ್ಯೆ ದಿವ್ಯಶ್ರೀ ಕಕ್ಕೆಪದವು..

spot_img
- Advertisement -
- Advertisement -

ಬರಹ: ಆಜ್ಞಾ ಸೋಹಮ್

ಮಂಗಳೂರು: ಕೃಷ್ಣ, ದೇವೇಂದ್ರ, ವಿಷ್ಣು, ದೇವಿ, ನಂದಿ, ಮಾಯಾಶೂರ್ಪನಖಿ, ವಿದ್ಯುನ್ಮತಿ, ರುಕ್ಮಾಂಗ, ಭ್ರಮರಕುಂತಳೆ, ಮಾಯಾಅಜಮುಖಿ, ಸುದರ್ಶನ, ಶಶಿಪ್ರಭೆ ಹೀಗೆ ಮುನ್ನೂರಕ್ಕೂ ಹೆಚ್ಚು ವಿವಿಧ ಪಾತ್ರಗಳನ್ನು ನಿರ್ವಹಿಸಿ ಯಕ್ಷಗಾನ ಕಲಾಪ್ರಿಯರ ಹೊಗಳಿಕೆಗೆ ಪಾತ್ರರಾದ ಯಕ್ಷಕನ್ಯೆ ದಿವ್ಯಶ್ರೀ.

ಕಕ್ಕೆಪದವಿನ ಸುತ್ತಮುತ್ತ ನಡೆಯುತ್ತಿದ್ದ ಆಟಗಳಿಗೆ ದಿವ್ಯಶ್ರೀ ಅವರು ಖಾಯಂ ಪ್ರೇಕ್ಷಕಿ. ತಂದೆ ಒಲ್ಲೆ ಎಂದರೂ ಚಿಕ್ಕಮ್ಮನ ಮನಒಲಿಸಿ ಆಟಕ್ಕೆ ಹೋಗುತ್ತಿದ್ದ ಇವರು ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡರು. ಆದರೆ ತಾನೊಂದು ದಿನ ವೇಷಧರಿಸುವೆನೆಂಬ ಕಲ್ಪನೆಯೇ ಇವರಿಗೆ ಇರಲಿಲ್ಲ. ತೀರಾ ಅನಿರೀಕ್ಷಿತವಾಗಿ ಬಣ್ಣ ಹಚ್ಚುವ ಭಾಗ್ಯ ಬಂದದ್ದು 4ನೇ ತರಗತಿಯಲ್ಲಿರುವಾಗ. ಶ್ರೀ ಕೃಷ್ಣಲೀಲೆ ಕಂಸವಧೆ ಪ್ರಸಂಗದಲ್ಲಿ ಗೋಪಿಕೆಯಾಗಿ ಮೊದಲು ರಂಗವನ್ನೇರುವ ಅವಕಾಶ ಒದಗಿತು. ಆಗ ಯಕ್ಷನಾಟ್ಯಾಬ್ಯಾಸವನ್ನು ಮಾಡಿಸಿದವರು ಶ್ರೀಯುತ ಭಾಸ್ಕರ್ ರೈ.

ಪ್ರಾಥಮಿಕ ಶಿಕ್ಷಣವನ್ನು ಶಾಸಕರ ಹಿರಿಯ ಪ್ರಾಥಮಿಕ ಶಾಲೆ ಉಳಿಕಕ್ಯಪದವು ಇಲ್ಲಿ ಪಡೆದು, ಶ್ರೀ ಪಂಚದುರ್ಗಾ ಪ್ರೌಡಶಾಲೆ ಕಕ್ಯಬೀಡು ಇಲ್ಲಿ ಪ್ರೌಡ ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿ ವಿದುಷಿ ಗ್ರೀಷ್ಮ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡಿದರು. ಕಲಿಕೆಯಲ್ಲಿ ಸದಾ ಮುಂದಿದ್ದ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದರು. ತಾಲೂಕು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ನೃತ್ಯ, ಕಂಠಪಾಠ, ಅಭಿನಯ ಗೀತೆ, ಭಾಷಣ, ಪ್ರಬಂಧ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ತದನಂತರ ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಹಾಗು ಎಸ್.ಡಿ.ಎಂ ಪಿ.ಜಿ.ಸೆಂಟರ್ ಇಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಸಂಧರ್ಭ ಇವರ ಯಕ್ಷಗಾನದ ಕಲಿಕೆಗೆ ಇನ್ನಷ್ಟು ಅವಕಾಶ ಒದಗಿತು. ಡಾ.ಕೋಳ್ಯೂರು ರಾಮಚಂದ್ರ ರಾವ್, ಅರುಣ್ ಕುಮಾರ್ ಧರ್ಮಸ್ಥಳ, ಮಾಲಿನಿ ಅಂಚನ್ ಇವರಿಂದ ಹೆಚ್ಚಿನ ಕಲಾ ವ್ಯಾಸಂಗವನ್ನು ಮಾಡಿದ ದಿವ್ಯಶ್ರೀ ಅವರು ಉತ್ತಮ ಕಲಾವಿದೆ ಎಂಬುವುದನ್ನು ಸಾಬೀತು ಪಡಿಸಿದರು.

ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದಲ್ಲಿ ನಡಿಯುತ್ತಿದ್ದ “ಯಕ್ಷೋತ್ಸವ” ಯಕ್ಷಗಾನ ಸ್ಪರ್ಧೆ,”ವಿಶ್ವ ಆಳ್ವಾಸ್ ನುಡಿಸಿರಿ” ಯಕ್ಷಗಾನ ಸ್ಪರ್ಧೆ,ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ನಡೆಯುತ್ತಿದ್ದ ಯಕ್ಷಗಾನ ಸ್ಪರ್ಧೆ, ವಿಜಯಾ ಕಾಲೇಜಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆ, ಬೆಂಗಳೂರರಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನ, ನಾಟ್ಯ ವೈಭವ ಇತ್ಯಾದಿ ಅನೇಕ ವೇದಿಕೆಗಳಲ್ಲಿ ಪಾತ್ರವಹಿಸಿದ ಇವರಿಗೆ “ವಿಶ್ವ ಆಳ್ವಾಸ್ ನುಡಿಸಿರಿ” ಯಕ್ಷಗಾನ ಸ್ಪರ್ಧೆಯಲ್ಲಿ ‘ಉತ್ತಮ ಸ್ತ್ರೀವೇಷದಾರಿ’ ಬಹುಮಾನ ಲಬಿಸಿದೆ.

ಪದವಿ ವ್ಯಾಸಂಗ ಮಾಡುತ್ತಿರುವಾಗ ಸತತ ಮೂರು ಬಾರಿ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಹೆಮ್ಮೆ ಇವರದ್ದು. ಅಷ್ಟಕ್ಕೇ ಸೀಮಿತವಾಗಿರದ ದಿವ್ಯಶ್ರೀ.ಜಿ.ಪೂಜಾರಿ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಅತ್ಯಂತ ಜನಪ್ರಿಯವಾಗಿದ್ದ “ಸೂಪರ್ ಮಿನಿಟ್” ರಿಯಾಲಿಟೀ ಶೋ ಇದರಲ್ಲಿ ತನ್ನ ತಮ್ಮನೊಂದಿಗೆ ಭಾಗವಹಿಸಿ ವಿಜೇತರಾಗಿದ್ದರು.

ಮುಕ್ತ ಫೇಸ್‍ಬುಕ್ ಚಾನಲ್ ಅವರು ನಡೆಸುತ್ತಿದ್ದ ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿಯೂ ಭಾಗವಹಿಸಿದ್ದಾರೆ. ಚಿತ್ರರಂಗದ ಕಡೆಗೂ ಒಲವು ಹರಿಸಿರುವ ಇವರು “ಆರ್ಟ್ ಬೈ” ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಕೆಪದವು ಇಲ್ಲಿಯ ಉಪನ್ಯಾಸಕಿಯಾಗಿರುವ ಇವರು ರಾಷ್ಟ್ರೀಯ ಸೇವಾ ಯೋಜನೆಯ ಸಹ ಯೋಜನಾಧಿಕಾರಿಯಾಗಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಅಮ್ಮನವರು ಜೊತೆಗೆ ,ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿರುವ ಡಾ.ಬಿ ಯಶೋವರ್ಮ ಅವರ ಪ್ರೋತ್ಸಾಹವನ್ನು ಮನದಾಳದಿಂದ ಸ್ಮರಿಸುತ್ತಾರೆ. ಕಲಿಕೆಯೊಂದಿಗೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ದಿವ್ಯಶ್ರೀ, ಕಕ್ಕೆಪದವಿನ ಡೊಂಬಯ್ಯ ಇಂದಿರಾ ದಂಪತಿಗಳ ಪುತ್ರಿ.

- Advertisement -
spot_img

Latest News

error: Content is protected !!