ಉಡುಪಿ : ಭಾಗವತಿಕೆ ಮಾಡುವಾಗಲೇ ಹೃದಯಾಘಾತವಾಗಿ ಭಾಗವತ ಸಾವನ್ನಪ್ಪಿರುವ ಘಟನೆ ಮುಂಬೈಯಲ್ಲಿ ನಡೆದಿದೆ.ಉಡುಪಿ ಮೂಲದ ಕುಕ್ಕೆಹಳ್ಳಿ ವಿಟ್ಠಲ ಪ್ರಭು ಮೃತ ಭಾಗವತ.
ಮುಂಬೈಯ ದೈಸರ್ ಕಾಶಿಮಠದಲ್ಲಿ ಯಕ್ಷಗಾನ ಸೇವೆ ಮಾಡುತ್ತಿದ್ದ ಕುಕ್ಕೆಹಳ್ಳಿ ವಿಟ್ಠಲ ಪ್ರಭು ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು ಬಂದು ಕೆಲವೇ ಕ್ಷಣಗಳಲ್ಲೇ ಅಸುನೀಗಿದ್ದಾರೆ. ಭಾಗವತಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ವಿಠ್ಠಲ ಪ್ರಭು ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಭಾಗವತಿಕೆಯನ್ನು ಬೇರೊಬ್ಬ ಭಾಗವತನಿಗೆ ಒಪ್ಪಿಸಿದ ಕೆಲವೇ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಿಠ್ಠಲ ಪ್ರಭು ಅವರು ಯಕ್ಷಗಾನವನ್ನು ಮುಂಬೈಯಲ್ಲಿ ಪರಿಚಯಿಸಲು ತನ್ನದೇ ಒಂದು ತಂಡವನ್ನು ಕಟ್ಟಿಕೊಂಡು ಮುಂಬೈ ನಗರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಭಾಗವತಿಗೆ, ಪಾತ್ರಧಾರಿ, ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ನಿರ್ದೇಶನ, ಮರಾಠಿ ಹಾಗೂ ಕೊಂಕಣಿ ಭಾಷೆಯಲ್ಲಿ ಯಕ್ಷಗಾನ, ಮುಂತಾದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿರಿಯರ ಮನೆಯಾದ ಉಡುಪಿ ಕುಕ್ಕೆಹಳ್ಳಿ ಮುಂಗ್ರಿಬೈಲು ನಲ್ಲಿ ಅಂತಿಮ ಸಂಸ್ಕಾರ ನಡೆಯಿತು.