ಮಂಗಳೂರು: ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಜೈಲಿನಲ್ಲಿರುವ ಐವರನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಭೇಟಿ, ಬಂಧಿತರೊಂದಿಗೆ ಶಾಸಕರು ಮಾತುಕತೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಯಶ್ ಪಾಲ್ ಸುವರ್ಣ ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್ ನೀಡಿದರು.
ನಂತರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ‘ದಕ್ಚಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಪಕ್ಷವು ತನ್ನ ಕಚೇರಿಯಾಗಿ ಬಳಸುತ್ತಿದೆ. ಈ ರೀತಿ ಅನ್ಯಾಯವನ್ನು ದುಡಿದು ತಿನ್ನುವವರಿಗೆ ಮಾಡಿದರೆ ಯಾರು ಕ್ಷಮಿಸುವುದಿಲ್ಲ. ಕರಾವಳಿಯಲ್ಲಿ ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರು ಸಹ ಮೀನುಗಾರಿಕೆ ಕೆಲಸ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಪೊಲೀಸರು ಮೀನುಗಾರರೊಂದಿಗೆ ನಡೆದುಕೊಂಡ ರೀತಿ ಬಹಳ ಬೇಸರವನ್ನುಂಟು ಮಾಡಿದೆ. ಪೊಲೀಸರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ತಕ್ಕ ಉತ್ತರ ನೀಡಲಾಗುವುದು. ನಾನೊಬ್ಬ ಶಾಸಕನಾಗಿ, ಮೀನುಗಾರನಾಗಿ ಅವರ ಜೊತೆಗೆ ನಿಲ್ಲುತ್ತೇನೆ,” ಎಂದರು.