
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೋಲನಮನೆ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಭೀಕರ ಕಾಡಾನೆ ದಾಳಿಯೊಂದು ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮಹಮ್ಮದ್ ಜಾಹಿದ್ ಅವರು ತಮ್ಮ ತಾಯಿ, ಅಕ್ಕ ಹಾಗೂ ಅವರ ಮಕ್ಕಳೊಂದಿಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಿಢೀರನೆ ಎದುರಾದ ಕಾಡಾನೆ ಕಾರಿನ ಮೇಲೆ ದಾಳಿ ನಡೆಸಿದ ಪರಿಣಾಮ ಕಾರಿನ ಹಿಂಭಾಗ ತೀವ್ರವಾಗಿ ಜಖಂಗೊಂಡಿದೆ. ಈ ಆಕಸ್ಮಿಕ ದಾಳಿಯಿಂದ ಭೀತಿಗೊಳಗಾದ ಕಾರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಜೋರಾಗಿ ಕಿರುಚಾಡಲು ಪ್ರಾರಂಭಿಸಿದರೂ, ಆನೆ ಮಾತ್ರ ಸ್ಥಳದಿಂದ ಕದಲದೆ ಕಾರಿನ ಬಳಿಯೇ ನಿಂತಿತ್ತು.
ಈ ಭೀತಿಯ ವಾತಾವರಣದಲ್ಲೂ ಧೈರ್ಯ ಗೆಡದ ಚಾಲಕ ಜಾಹಿದ್, ತಕ್ಷಣವೇ ಕಾರಿನ ‘ಪಾರ್ಕಿಂಗ್ ಲೈಟ್’ ಆನ್ ಮಾಡಿದ್ದಾರೆ. ಲೈಟ್‌ನ ಬೆಳಕನ್ನು ಕಂಡು ಆನೆ ಕಾರಿನಿಂದ ಸ್ವಲ್ಪ ದೂರ ಹೋಗಿ ನಿಂತಾಗ, ಅವರು ತಕ್ಷಣವೇ ಆನೆ ಕಾರ್ಯಪಡೆಗೆ (ETF) ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಇಟಿಎಫ್ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಾನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಜಾಹಿದ್ ಅವರ ಜಾಣ್ಮೆ ಹಾಗೂ ಇಟಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಕಾರಿನಲ್ಲಿದ್ದ ಪ್ರತಿಯೊಬ್ಬರೂ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.


