ಕಡಬ:ಕೆಲವೊಂದು ಯೋಜನೆಗಳನ್ನು ಸರ್ಕಾರ ಬಡ ಜನರಿಗೆ ಅನುಕೂಲವಾಗಲಿ ಅಂತಾ ಜಾರಿಗೆ ತರುತ್ತೋ ಇಲ್ವೋ ಅವರ ಜೀವದ ಆಟವಾಡಲು ಜಾರಿಗೆ ತರುತ್ತೋ ಅನ್ನೋ ಅನುಮಾನ ಮೂಡುತ್ತೆ. ಇದೀಗ ಅನ್ನಭಾಗ್ಯದ ಯೋಜನೆ ಹೆಸರಲ್ಲಿ ಸರ್ಕಾರ ಬಡ ಜೀವಗಳ ಆರೋಗ್ಯದ ಜೊತೆ ಆಟವಾಡುತ್ತಿದೆ ಅನ್ನೋದು ಸ್ಪಷ್ಟವಾಗಿದೆ.
ಹೌದು.. ಕಡಬ ತಾಲೂಕಿನ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯಲ್ಲಿ ಬಿಪಿಎಲ್ ಪಡಿತರದಾರರಿಗೆ ಪ್ರತೀ ತಿಂಗಳು ವಿತರಿಸುವ ಅನ್ನ ಭಾಗ್ಯದ ಅಕ್ಕಿಯಲ್ಲಿ ಕಲ್ಲು, ಪಂಚಕಜ್ಜಾಯ, ಹುಣಸೆ ಬೀಜ ಕಂಡು ಬಂದಿದ್ದು, ಇದನ್ನು ತಿನ್ನಲು ಕೊಡುತ್ತಾರಾ ಇಲ್ಲ ನಮ್ಮ ಜೀವ ತೆಗೆಯಲಾ ಎಂದು ಫಲಾನುಭವಿಗಳು ಪ್ರಶ್ನಿಸುತ್ತಿದ್ದಾರೆ
ಕೊಯಿಲ ಶಾಖೆಯಲ್ಲಿ ಪ್ರತೀ ತಿಂಗಳು ಹತ್ತು ತಾರೀಕಿನ ನಂತರ ಅನ್ನ ಭಾಗ್ಯ ಅಕ್ಕಿ ವಿತರಿಸಲಾಗುತ್ತಿದೆ. ಎಂದಿನಂತೆ ಹತ್ತು ತಾರೀಕಿನ ಬಳಿಕ ಅಕ್ಕಿ ವಿತರಿಸಲಾಗುತ್ತಿತ್ತು. ವಿತರಣೆಗೆ ಕಳೆದ ಬಾರಿ ಸರಬರಾಜಾದ ಉಳಿಕೆ ಅಕ್ಕಿಯನ್ನು ಬಳಸಿದ ಬಳಿಕ, ಈ ಬಾರಿಯೂ ಈ ಶಾಖೆಗೆ ಮೀಸಲಾದ 300 ಚೀಲ ಅಕ್ಕಿ ಆಲಂಕಾರಿನಲ್ಲಿರುವ ಆಹಾರ ಇಲಾಖೆಯ ಗೋಡೌನ್ ನಿಂದ ಸರಬರಾಜು ಆಗಿದೆ. ಈ ಪೈಕಿ ಅಕ್ಕಿ ವಿತರಣೆಗಾಗಿ 25 ಚೀಲವನ್ನು ತೆರೆಯಲಾಗಿದೆ. ಅದರಲ್ಲಿ ನಾಲ್ಕು ಚೀಲದಲ್ಲಿ ಒಂದು ಕೆಜಿ ತೂಗುವ ಎರಡು ಸಣ್ಣ ಸಣ್ಣ ಕಲ್ಲಿನ ಪ್ಯಾಕ್, ಹುಣಸೆ ಬೀಜ, ದೇವಸ್ಥಾನಗಳಲ್ಲಿ ಕೊಡುವಂತಹ ಗೋಧಿಪುಡಿಯಂತಹ ಪಂಚಕಜ್ಜಾಯ ಪ್ರಸಾದ ಸಿಕ್ಕಿವೆ.
ಪ್ರತೀ ಬಾರಿ ಸೆಣಬು ಗೋಣಿ ಚೀಲದಲ್ಲಿ ಅಕ್ಕಿ ಪೂರೈಕೆಯಾಗುತ್ತಿದ್ದರೆ. ಈ ಬಾರಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ಸರಬರಾಜು ಮಾಡಲಾಗಿದೆ. ಸಂಘದ ಕೊಯಿಲ ಶಾಖೆಗೆ ಮಾತ್ರ ಈಗ ಈ ತಿಂಗಳ ಅಕ್ಕಿ ಪೂರೈಕೆಯಾಗಿದ್ದು, ಉಳಿದ ಆಲಂಕಾರು ಪ್ರಧಾನ ಕಛೇರಿ, ಕುಂತೂರು ಶಾಖೆ, ಹಳೆನೇರೆಂಕಿ ಶಾಖೆಗಳಿಗೆ ಇನ್ನಷ್ಟೆ ಪೂರೈಕೆಯಗಬೇಕಿದೆ.ಆಲಂಕಾರಿನ ಖಾಸಗಿಯವರ ಕಟ್ಟಡವೊಂದರಲ್ಲಿ ಶೇಖರಣೆಯಾಗುವ ಅನ್ನ ಭಾಗ್ಯ ಅಕ್ಕಿಯನ್ನು ಕಡಬ ತಾಲೂಕಿನ ಎಲ್ಲಾ ಸಹಕಾರಿ ಸಂಘಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಕಳಪೆ ಅಕ್ಕಿಯನ್ನು ಪೂರೈಕೆ ಮಾಡಿರುವ ವಿಚಾರ ಈ ಬೆಳವಣಿಗೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಸಂಬಂಧಪಟ್ಟವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು , ಈ ವಿಷಯ ಗಮನಕ್ಕೆ ಬಂದಿದೆ, ಕಳಪೆ ಮಟ್ಟದ ಅಕ್ಕಿ ಪೂರೈಕೆ ಅಥವಾ ಅಕ್ಕಿಯಲ್ಲಿ ಕಲ್ಲು ಮಣ್ಣು ಪ್ಯಾಕೆಟ್ ಸಿಕ್ಕಿರುವ ಬಗ್ಗೆ ಈಗಾಗಲೇ ದೂರು ಬಂದಿದೆ ಈ ಹಿನ್ನೆಲೆಯಲ್ಲಿ ಆಹಾರ ಪರಿವೀಕ್ಷಕರು ಹಾಗೂ ಕಂದಾಯ ನಿರೀಕ್ಷಕರನ್ನು ಪರಿಶೀಲನೆಗಾಗಿ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.