ಹುಬ್ಬಳ್ಳಿ: ವಕ್ಫ್ ಆಸ್ತಿ ಪ್ರಕರಣದಲ್ಲಿ ವಿವಿಧ ಜಿಲ್ಲೆಗಳಲ್ಲಿನ ರೈತರ ಜಮೀನು, ಮನೆ ಶಾಲೆಗಳಿಗೆ ತೊಂದರೆಯಾಗಿದ್ದು, ವಕ್ಫ್ ನೋಟಿಸ್’ ವಿವಾದ ತಾರಕಕ್ಕೇರಿರುವ ನಡುವೆಯೇ ವಕ್ಫ್ ತಿದ್ದುಪಡಿ ಮಸೂದೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಗುರುವಾರ ರಾಜ್ಯದ ಹುಬ್ಬಳ್ಳಿ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇನ್ನು ಜಗದಾಂಬಿಕಾ ಪಾಲ್ ಅವರ ಈ ಭೇಟಿ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಕ್ಫ್ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಪ್ರತಿಕ್ರಿಯಿಸಿ, ‘ಕರ್ನಾಟಕದ ಸಚಿವರು ನನ್ನ ಪ್ರವಾಸದ ಬಗ್ಗೆ ಕಾನೂನಾತ್ಮಕವಾದ ಪ್ರಶ್ನೆಯನ್ನು ಎತ್ತಿದ್ದಾರೆ. ನಾನು ಒಬ್ಬ ಸಂಸದನಾಗಿಯೂ ದೇಶದ ಯಾವುದೇ ಭಾಗಕ್ಕೂ ಹೋಗಬಹುದು ಎಂದು ತಿರುಗೇಟು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಸುದ್ದಿಗಾರರ ಜತೆ ಮಾತನಾಡಿ, `ಜೆಪಿಸಿ ಅಧ್ಯಕ್ಷರು ಸರಕಾರ ಮತ್ತು ಅಧಿಕಾರಿಗಳಿಗೆ ಯಾವ ಮಾಹಿತಿ ನೀಡದೆ ಪಕ್ಷದ ಕೆಲಸಕ್ಕೆ ಓರ್ವ ಸಂಸದನನ್ನು ಕರೆದುಕೊಂಡು ಬಂದಿದ್ದಾರೆ. ಜೆಪಿಸಿ ಎಂಬುದೊಂದು ನಾಟಕದ ಕಂಪೆನಿ ಇದ್ದ ಹಾಗೆ,’ ಎಂದು ಕಿಡಿಕಾರಿದ್ದಾರೆ.
ಜೆಪಿಸಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸದಸ್ಯರಾಗಿದ್ದಾರೆಯೇ? ಇದರಲ್ಲಿ ಸಚಿವರು ಇರಲು ಆಗುವುದಿಲ್ಲ. ಜನರಿಂದ ಅರ್ಜಿ ಪಡೆದಂತೆ ಮಾಡಿ ರಾಜಕೀಯ ಪ್ರಚಾರ ಮಾಡಲು ಆಗಮಿಸಿದ್ದಾರೆ ಎಂದರು. ಬುಧವಾರವೇ ರಾಜ್ಯದ ವಕ್ಫ್ ಸಚಿವ ಜಮೀರ್ ಅಹಮದ್, ಜೆಪಿಸಿ ಅಧ್ಯಕ್ಷ ರಾಜ್ಯ ಭೇಟಿ ಅನಧಿಕೃತ ಎಂದು ಗುಡುಗಿದ್ದರು.