ವಿಶಾಖಪಟ್ಟಣಂ (ಮೇ 7): ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಎಲ್ಜಿ ಪಾಲಿಮರ್ಸ್ ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದೆ. ಸೋರಿಕೆಯಾದ ಗ್ಯಾಸ್ ಕಿಲೋಮೀಟರ್ಗಟ್ಟಲೆ ವ್ಯಾಪಿಸುತ್ತಿರುವುದರಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಲು 5 ಗ್ರಾಮಗಳ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಿಂದ ಈಗಾಗಲೇ 8 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 5,000ಕ್ಕೂ ಹೆಚ್ಚು ಜನರು ವಿಷಾನಿಲ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಜಿ ಪಾಲಿಮರ್ಸ್ ಕಾರ್ಖಾನೆಯ ಸುತ್ತಮತ್ತಲೂ 5 ಕಿ.ಮೀ. ವ್ಯಾಪ್ತಿಯ 5 ಗ್ರಾಮಗಳನ್ನು ಸಂಪೂರ್ಣ ಖಾಲಿ ಮಾಡಿಸಲಾಗಿದೆ. ಇನ್ನೂ 2 ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ವಹಿಸಿ, ಹೆಚ್ಚಿನ ಅಪಾಯವಾಗುವುದನ್ನು ತಡೆಗಟ್ಟುವಂತೆ ಗೃಹ ಸಚಿವಾಲಯಕ್ಕೆ ಸೂಚಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ವಿಶಾಖಪಟ್ಟಣಂನ ಆರ್ಆರ್ ವೆಂಕಟಾಪುರಂ ಎಂಬ ಗ್ರಾಮದ ಬಳಿ ಇಂದು ಬೆಳಗ್ಗೆ 3 ಗಂಟೆಯ ವೇಳೆಗೆ ಈ ಅವಘಡ ನಡೆದಿದೆ. ಎಲ್ಜಿ ಪಾಲಿಮರ್ಸ್ ಇಂಡಸ್ಟ್ರಿ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಾದ ಕಾರಣ ಸುತ್ತಮುತ್ತಲಿನ ಮನೆಗಳಿಗೂ ವಿಷಾನಿಲ ಹರಡಿದೆ. ಇದರಿಂದ ಮುಂಜಾನೆ ವಾಕಿಂಗ್ಗೆ ಹೊರಗೆ ಬಂದಿದ್ದ ಸಾಕಷ್ಟು ಜನರು ಅಸ್ವಸ್ಥರಾಗಿ ರಸ್ತೆಯಲ್ಲೇ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ವಿಷಾನಿಲ ಸೇವನೆಯಿಂದ ಜನರು ರಸ್ತೆಗಳಲ್ಲಿ ಬಿದ್ದು ಹೊರಳಾಡುತ್ತಿದ್ದ ವಿಡಿಯೋಗಳು ಟ್ವಿಟ್ಟರ್ನಲ್ಲಿ ಹರಿದಾಡುತ್ತಿವೆ. ಹತ್ತಾರು ಆಂಬುಲೆನ್ಸ್ಗಳ ಮೂಲಕ ಅಸ್ವಸ್ಥಗೊಂಡಿದ್ದ ಜನರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಫ್ಯಾಕ್ಟರಿಯಿಂದ ಗ್ಯಾಸ್ ಹರಡುತ್ತಲೇ ಇರುವುದರಿಂದ ಇಲ್ಲಿನ ಸುತ್ತಮುತ್ತಲಿನ 5 ಗ್ರಾಮಗಳ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.