
ವಿಟ್ಲ; ತಿಮಿಂಗಿಲ ವಾಂತಿ( ಅಂಬರ್ ಗ್ರೀಸ್ ) ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಕರೋಪಾಡಿ ನಿವಾಸಿ ಕುಮುದಾಕ್ಷ (27) ಹಾಗೂ ಬಂಟ್ವಾಳ ವಿಟ್ಲ ಕಸಬಾ ನಿವಾಸಿ ಧನು ಕುಮಾರ್ (32) ಬಂಧಿತರು.
ದಿನಾಂಕ 24-06-2026 ರಂದು ರಾತ್ರಿ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣರವರಿಗೆ ವನ್ಯಜೀವಿ ಉತ್ಪನ್ನವಾದ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ)ಯನ್ನು ಮಾರಾಟ ಮಾಡಲು ಸ್ಕೂಟರ್ ನಲ್ಲಿ ಸಾಗಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬೋಳಂತಿಮೊಗರು ಎಂಬಲ್ಲಿಗೆ ತೆರಳಿ, ಸಿಬ್ಬಂದಿ ಸಹಾಯದಿಂದ ಸದ್ರಿ ಸ್ಕೂಟರನ್ನು ತಡೆದು, ಅದರಲ್ಲಿದ್ದ ಎಂಬವರುಗಳನ್ನು ವಿಚಾರಿಸಿದಾಗ, ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5.73 ಗ್ರಾಂ ತೂಕದ ವಸ್ತುವನ್ನು ಹಾಜರುಪಡಿಸಿ, ಇದು ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಎಂಬುದಾಗಿ ತಿಳಿಸಿರುತ್ತಾರೆ. ಮುಂದಿನ ಕಾನೂನುಕ್ರಮಕ್ಕಾಗಿ ಸದ್ರಿ ಸೊತ್ತನ್ನು, ಆರೋಪಿಗಳ ಬಳಿಯಿದ್ದ 02 ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 140/2026, ಕಲಂ: 51 THE WILD LIFE (PROTECTION) ACT, 1972, ಕಲಂ: 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


