ಪುತ್ತೂರು: ಎರಡು ದಶಕಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಪುತ್ತೂರು ನ್ಯಾಯಾಲಯ ಇತ್ಯರ್ಥ ಪಡಿಸಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.
ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಪುತ್ತೂರು ಸೂತ್ರಬೆಟ್ಟುವಿನ ವಿಶ್ವನಾಥ ರೈಯವರನ್ನು 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಕೊಲೆ ಮಾಡಿದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅಪರಾಧಿಯಾಗಿರುವ ಕೋಡಿಂಬಾಡಿ ನಿವಾಸಿ ವಿಶ್ವನಾಥ ಶೆಟ್ಟಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಕೊಲೆ ಮಾಡಿರುವ ಅಪರಾಧ IPC 302ಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ, ಸಾಕ್ಷಿನಾಶಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 8 ತಿಂಗಳು ಜೈಲು ಶಿಕ್ಷೆ ಹಾಗೂ ಕೊಲೆ ಬೆದರಿಕೆಯೊಡ್ಡಿದ ಅಪರಾಧಕ್ಕಾಗಿ 3 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ.
ದಂಡದ ಮೊತ್ತದಲ್ಲಿ 60 ಸಾವಿರ ರೂ.ಗಳನ್ನು ಕೊಲೆಯಾದ ವಿಶ್ವನಾಥ ರೈಯವರ ಪತಿಗೆ ನೀಡಬೇಕು ಮತ್ತು ರೂ. 20 ಸಾವಿರವನ್ನು ಮಾಫಿ ಸಾಕ್ಷಿಯಾಗಿರುವ ಸುಭಾಶ್ಚಂದ ಗೌಡರಿಗೆ ನೀಡುವಂತೆಯೂ ಮಾನ್ಯ ನ್ಯಾಯಾಲಯ ಆದೇಶಿಸಿದೆ.ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ವಾದಿಸಿದರು.