ಉಡುಪಿ: ಬ್ರಹ್ಮಾವರದ ಕುಮ್ರಗೋಡಿನ ಫ್ಲಾಟ್‍ವೊಂದರಲ್ಲಿ ನಡೆದ ವಿಶಾಲ ಗಾಣಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ, ಪತಿಯೇ ಸುಪಾರಿ ನೀಡಿ ಪತ್ನಿಯನ್ನು ಕೊಲೆಗೈದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಂಗೊಳ್ಳಿ ಸಮೀಪ ಗುಜ್ಜಾಡಿ ನಾಯಕವಾಡಿಯ ನಿವಾಸಿ ವಾಸು ಗಾಣಿಗರ ಪುತ್ರಿ ವಿಶಾಲ ಗಾಣಿಗ ಬ್ರಹ್ಮಾವರದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ನಿಗೂಢವಾಗಿ ಕೊಲೆಯಾಗಿದ್ದು, ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮತ್ತೆ ವಿಶಾಲ ಗಾಣಿಗ ಪತಿ ದುಬೈನಿಂದ ಬಂದಿದ್ದ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ತಿಳಿದು ಬಂದಿದೆ.ಪೊಲೀಸ್ ಮೂಲಗಳ ಪ್ರಕಾರ, ರಾಮಕೃಷ್ಣ ಗಾಣಿಗ ಉತ್ತರ ಪ್ರದೇಶದ ಹಾಗೂ ಬೆಂಗಳೂರು ಮೂಲದ ಇಬ್ಬರು ಸುಪಾರಿ ಕಿಲ್ಲರ್ ಗಳ ಮೂಲಕ ದುಬೈನಲ್ಲಿ ಇದ್ದುಕೊಂಡೇ ಸಂಚು ರೂಪಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಈಗಾಗಲೇ ಇಬ್ಬರು ಸುಪಾರಿ ಕಿಲ್ಲರ್‍ಗಳನ್ನು ಪೊಲೀಸರು ಹೊರ ರಾಜ್ಯದಲ್ಲಿ ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ರಾಮಕೃಷ್ಣ ಗಾಣಿಗ ಉಡುಪಿ, ಮಣಿಪಾಲ. ಬ್ರಹ್ಮಾವರದಲ್ಲಿ ಭೂಮಿ ಖರೀದಿ ಮಾಡಿ ಕೊಟ್ಯಾಂತರ ರೂ ಮೊತ್ತದ ವಹಿವಾಟು ನಡೆಸುತ್ತಿದ್ದ. ಭೂಮಿ ಮಾರಾಟಕ್ಕೆ ಸಂಬಂಧಿಸಿದ ವ್ಯವಹಾರವನ್ನು ವಿಶಾಲ ಗಾಣಿಗ ಅವರೇ ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ರಾಮಕೃಷ್ಣನನ್ನು ಪೊಲೀಸರು ಈಗಾಗಲೇ ಎರಡು ಮೂರು ಬಾರಿ ವಿಚಾರಣೆ ನಡೆಸಿದ್ದರು. ಇದೀಗ ಸಂಶಯದ ಮೇರೆಗೆ ಕೆಲವೊಂದು ಮಾಹಿತಿಗಾಗಿ ರಾಮಕೃಷ್ಣ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಾಟ್ಸ್ಅಪ್ ಮೇಸೆಜ್ ಪತಿಗೆ ಉರುಳಾಯಿತಾ?:
ಘಟನೆ ನಡೆದ ದಿನ ವಿಶಾಲ ಗಾಣಿಗ ಅವರು ತಮ್ಮ ದಿನವಹಿ ಕಾರ್ಯಗಳ ಬಗ್ಗೆ ಪತಿಯೊಂದಿಗೆ ಸಂದೇಶದ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈ ಮೂಲಕ ದುಬೈಯಲ್ಲಿದ್ದು ಕೊಂಡೇ ಪತಿ ಪತ್ನಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪತಿ ಪತ್ನಿ ನಡುವಿನ ಮೊಬೈಲ್ ಚಾಟ್ ಹಿಸ್ಟ್ರೀ ಪತಿಯ ಕಡೆಗೆ ಶಂಶಯ ಹೆಚ್ಚಾಗುವಂತೆಮಾಡಿದೆ. ಈ ಮೊಬೈಲ್ ಸಂದೇಶದ ಜಾಡು ಹಿಡಿದು ಹೊರಟ ಪೊಲೀಸರು ಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗ ಬೇಕಿದೆ