ಬೆಳ್ತಂಗಡಿ : ವೇಣೂರಿನಲ್ಲಿ ನಡೆದಿದ್ದ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಜ.28 ರಂದು ಸಂಜೆ ವೇಣೂರಿನ ಕುಕ್ಕೇಡಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಕೆ ವೇಳೆ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮೂವರನೇ ಆರೋಪಿ ದುರಂತದಲ್ಲಿ ಸಾವನ್ನಪ್ಪಿದ ವರ್ಗೀಸ್ ಆಗಿದ್ದಾರೆ. ನಾಲ್ಕನೇ ಆರೋಪಿ ಬೆಂಗಳೂರು ಉತ್ತರದ ದಿವಾನರ ಪಾಳ್ಯ ಗೋಕುಲ ನಿವಾಸಿ ಚಾರ್ಲ್ಸ್ ಮಧುಕರ್ ಮಗ ಅನಿಲ್ ಎಂ ಡೇವಿಡ್(49)ಆಗಿದ್ದು, ಈತನನ್ನು ಫೆ.4 ರಂದು ಬೆಂಗಳೂರಿನಿಂದ ಬಂಧಿಸಿ ಫೆ.5 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ನಾಲ್ಕನೇ ಆರೋಪಿ ಅನಿಲ್ ಎಂ ಡೇವಿಡ್ ಪಟಾಕಿ ತಯಾರಿಕೆಗೆ ರಾಸಾಯನಿಕಗಳನ್ನು ಸರಬರಾಜು ಮಾಡುವ ಲೈಸನ್ಸ್ ಪಡೆದಿದ್ದ. ಪಟಾಕಿ ತಯಾರಿಕೆ ಮಾಡುವವರಿಗೆ ಈತ ತಮಿಳುನಾಡಿನಿಂದ ನೇರವಾಗಿ ಬಿಲ್ ಮಾಡಿ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದ. ವೇಣೂರಿನ ಬಶೀರ್ ಗೆ ಅಧಿಕ ಮಟ್ಟದಲ್ಲಿ ಪಟಾಕಿ ರಾಸಾಯನಿಕಗಳನ್ನು ಸರಬರಾಜು ಮಾಡಿದ್ದ ಆರೋಪದಲ್ಲಿ ಬಂಧಿಸಲಾಗಿದೆ.