ಮಂಗಳೂರು: ಈಗಾಗಲೇ ದೇಶದ ಬಹುತೇಕ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆ ಲಭ್ಯವಿದ್ದು ಶೀಘ್ರದಲ್ಲೇ ಮುಂಬೈ ಮಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ವಂದೇ ಭಾರತ್ ರೈಲು ಸೇವೆ ಆರಂಭವಾದ ಬಳಿಕ ಕೇವಲ 12 ಗಂಟೆಯಲ್ಲಿ ಪ್ರಯಾಣಿಕರು ಮುಂಬೈನಿಂದ ಮಂಗಳೂರು ತಲುಪಬಹುದಾಗಿದೆ. ಸದ್ಯ ಮುಂಬೈ-ಮಂಗಳೂರು ರೈಲು ಪ್ರಯಾಣಕ್ಕೆ 15 ತಾಸು ತಗಲುತ್ತಿದ್ದು ವಂದೇ ಭಾರತ್ ಆರಂಭವಾದ ಬಳಿಕ ಅದು 12 ಗಂಟೆಗೆ ಇಳಿಕೆಯಾಗಲಿದೆ. ಜೊತೆಗೆ ಆರಾಮಾದಾಯಕ ಪ್ರಯಾಣವೂ ಸಿಗಲಿದೆ.
ಕೇಂದ್ರ ರೈಲ್ವೇ ಇಲಾಖೆ ಇದೀಗ ಮುಂಬೈ-ಮಂಗಳೂರು ವಂದೇ ಭಾರತ್ ರೈಲಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಂಗಳೂರು ಗೋವಾ ಹಾಗೂ ಗೋವಾ-ಮುಂಬೈ ವಂದೇ ಭಾರತ್ ರೈಲು ಸೇವೆ ಲಭ್ಯವಿದೆ. ಆದರೆ ಈ ಎರಡು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 70. ಅದರಲ್ಲೂ ಮಂಗಳೂರು ಗೋವಾ ರೈಲಿನ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 40 ಮಾತ್ರ. ಹೀಗಾಗಿ ಇದೀಗ ಮುಂಬೈ-ಮಂಗಳೂರು ನೇರ ರೈಲು ಪ್ರಯಾಣಕ್ಕೆ ರೈಲ್ವೇ ಇಲಾಖೆ ಮುಂದಾಗಿದೆ.
ಸದ್ಯ ಮುಂಬೈ-ಗೋವಾ ರೈಲು ಮುಂಬೈ ನಿಲ್ದಾಣದಿಂದ ಪ್ರತಿ ದಿನ ಬೆಳಗ್ಗೆ 5.25ಕ್ಕೆ ಹೊರಡಲಿದೆ. ಗೋವಾ ನಿಲ್ದಾಣಕ್ಕೆ ಮಧ್ಯಾಹ್ನ 1.10ಕ್ಕೆ ತಲುಪಲಿದೆ. ಇದೀಗ ಈ ರೈಲು ಸೇವೆ ಮಂಗಳೂರಿಗೆ ವಿಸ್ತರಣೆಗೊಳ್ಳಲಿದೆ. ಮಂಗಳೂರಿಗೆ ಸಂಜೆ 6 ಗಂಟೆಗೆ ತಲುಪಲಿದೆ. ಇನ್ನು ಮಂಗಳೂರು ಗೋವಾ ವಂದೇ ಭಾರತ್ ರೈಲು ಮಂಗಳೂರು ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಗೋವಾಗೆ ಮಧ್ಯಾಹ್ನ 1.10ಕ್ಕೆ ತಲುಪಲಿದೆ. ಈ ರೈಲು ಸೇವೆ ಮುಂಬೈ ವರೆಗೆ ವಿಸ್ತರಣೆಯಾಗುತ್ತಿದೆ. ರಾತ್ರಿ 9 ಗಂಟೆಗೆ ಮುಂಬೈ ತಲುಪಲಿದೆ.