ಕಾರವಾರ: ಮೇ.3 ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಕಾರ್ಯ ನಿರ್ವಹಿಸಲು ಆಗಮಿಸುವ ನೌಕರರು ಕಡ್ಡಾಯವಾಗಿ ಜ್ವರ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಆದೇಶಿಸಿದ್ದಾರೆ .
ರಾಜ್ಯ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಕಚೇರಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಯನ್ನು ಒದಗಿಸುತ್ತಿರುವ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಸರ್ಕಾರ ಆದೇಶಿದೆ ಮತ್ತು ಸರ್ಕಾರಿ ನಿಗಮ/ ಮಂಡಳಿ/ ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್- ಎ ಮತ್ತು ಬಿ ವೃಂದದ ಎಲ್ಲಾ ಅಧಿಕಾರಿಗಳು ಮತ್ತು ಗ್ರೂಪ್- ಸಿ ಮತ್ತು ಡಿ ವೃಂದಗಳ ಶೇಕಡಾ 33 ರಷ್ಟು ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಹಾಜರಾಗಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಈ ಆದೇಶದ ಅನ್ವಯ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಅವರ ಮೂಲಕ ಕೋವಿಡ್- 19 ಸೋಂಕು ಹರಡುವ ಸಾಧ್ಯತೆಗಳು ಇರುತ್ತದೆ. ಈ ಹಿನ್ನಲೆಯಲ್ಲಿ ಆರೋಗ್ಯ ದೃಷ್ಟಿಯಿಂದ ಜಿಲ್ಲೆಗೆ ಆಗಮಿಸುವ ಅಧಿಕಾರಿ, ಸಿಬ್ಬಂದಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಅತ್ಯವಶ್ಯದೆ.
ಕಾರಣ ಜಿಲ್ಲೆಗೆ ಆಗಮಿಸುವ ಎಲ್ಲಾ ನೌಕರರು ಕಡ್ಡಾಯವಾಗಿ ಹತ್ತಿರದ ಜ್ವರ ತಪಾಸಣಾ ಕೇಂದ್ರಗಳಿಗೆ ತೆರಳಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಈ ಕುರಿತು ಪ್ರಮಾಣ ಪತ್ರ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು. ಜ್ವರ ತಪಾಸಣಾ ಕೇಂದ್ರದಲ್ಲಿ ವೈದ್ಯರು ಸರ್ಕಾರಿ ಅಥವಾ ಗೃಹ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿದರೆ ಅವರ ನಿರ್ದೇಶನದಂತೆ ಕ್ವಾರಂಟೈನಲ್ಲಿ ಇರತಕ್ಕದ್ದು ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ವಿವಿಧ ಇಲಾಖೆ ಹಾಗೂ ಸಂಸ್ಥೆಯ ಮುಖ್ಯಸ್ಥರು ತಮ್ಮ ಕಚೇರಿಗಳಿಗೆ ಹೊರ ಜಿಲ್ಲೆ ಅಥವಾ ರಾಜ್ಯದಿಂದ ಆಗಮಿಸುವ ಅಧಿಕಾರಿ ಅಥವಾ ಸಿಬ್ಬಂದಿ ಜ್ವರ ತಪಾಸಣೆಗೆ ಒಳಪಟ್ಟಿರುವ ಕುರಿತು ಜ್ವರ ತಪಾಸಣಾ ವರದಿಯನ್ನು ಪರಿಶೀಲಿಸಿ ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳಬೇಕು. ಈ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.