ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಮತ್ತು ಬಾಂಬ್ ದಾಳಿಗಳನ್ನು ರದ್ದುಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇರಾನ್‌ನ ಉನ್ನತ ನಾಯಕತ್ವದೊಂದಿಗೆ ನಡೆದ ರಾಜತಾಂತ್ರಿಕ ಮಾತುಕತೆಗಳು ಯಶಸ್ವಿ ಹಂತ ತಲುಪಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ತಮ್ಮ ‘ಟ್ರೂತ್ ಸೋಷಿಯಲ್’ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಟ್ರಂಪ್, ಉಭಯ ದೇಶಗಳ ಅತ್ಯುನ್ನತ ಮಟ್ಟದ ಮಾತುಕತೆಗಳಿಗೆ ಒಪ್ಪಿಗೆ ಸಿಕ್ಕಿರುವುದರಿಂದಲೇ ನಿಗದಿತ ದಾಳಿಗಳನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಪ್ಪಂದದ ಕರಡು ಪ್ರತಿಯ ಮುಖ್ಯಾಂಶಗಳು ಹೀಗಿವೆ:
1.ತಾನು ಯಾವತ್ತೂ ಪರಮಾಣು ಅಸ್ತ್ರ ಹೊಂದುವುದಿಲ್ಲ ಎಂದು ಮಾತು ಕೊಡುವುದು ಮತ್ತು ತನ್ನಲ್ಲಿರುವ ಸಂಸ್ಕರಿಸಿದ ಯುರೇನಿಯಂನ್ನು ಬಿಟ್ಟುಕೊಡುವುದು. (ಇರಾನ್ ಬಳಿ ಶೇಕಡಾ 60 ರಷ್ಟು ಎನ್ರಿಚ್ ಆದ 440 ಕಿಲೋ ಯುರೇನಿಯಂ ಇದೆ ಎಂದು International Atomic Energy Agency ಹೇಳುತ್ತಿದೆ. ಅದು ಶೇಕಡಾ 90ರಷ್ಟು ಸಂಸ್ಕರಿಸಿದರೆ ಪರಮಾಣು ಬಾಂಬು ಸಿದ್ಧಗೊಂಡಂತೆಯೇ) ಇರಾನ್ ಅಷ್ಟನ್ನೂ ಯಾರಿಗೆ ಯಾವಾಗ ಎಲ್ಲಿ ಹೇಗೆ ಬಿಟ್ಟುಕೊಡುವುದು ಎಂಬುದನ್ನು ಇನ್ನೆರಡು ತಿಂಗಳುಗಳಲ್ಲಿ ಅಖೈರು ಮಾಡಲಾಗುವುದು.
2.ಹೊರ್ಮುಜ್ ಜಲಸಂಧಿಯನ್ನು ಹಂತಹಂತವಾಗಿ ತೆರೆಯಲಾಗುತ್ತದೆ. ಅಮೇರಿಕಾ ಇರಾನ್ ಬಂದರುಗಳಲ್ಲಿ ಹಾಕಿರುವ ದಿಗ್ಬಂಧನಗಳನ್ನು ತೆರವು ಮಾಡುತ್ತದೆ.
3.ಇರಾನ್ ಮೇಲೆ ಅಮೇರಿಕಾ ಮತ್ತು ಯುರೋಪಿಯನ್ ಒಕ್ಕೂಟ ಹಾಕಿರುವ ತೈಲಮಾರಾಟ ನಿರ್ಬಂಧಗಳನ್ನು ಹಿಂಪಡೆಯುತ್ತದೆ. ಇನ್ನು ಮುಂದೆ ಇರಾನ್ ಆಯಿಲ್ ಮಾರ್ಕೆಟ್ ನಲ್ಲಿ ಮುಕ್ತವಾಗಿ ಕಾಣಿಸಲಿದೆ.
4.ಇಸ್ರೇಲ್ ಮತ್ತು ಹೆಜ್ಬುಲ್ಲಾ ಹೊಡೆದಾಟ ನಿಲ್ಲಿಸಲಾಗುತ್ತದೆ.
5.ಇನ್ನೊಂದು ದೇಶದ ಆಂತರಿಕ ವ್ಯವಹಾರದಲ್ಲಿ ಯಾರೂ ಯಾವತ್ತೂ ಕೈಹಾಕಬಾರದು ಎಂದು ಒಪ್ಪಂದ ಮಾಡಿಕೊಳ್ಳಲಾಗುವುದು.
ಯುದ್ಧದಲ್ಲಾದ ನಷ್ಟ ತುಂಬಿಕೊಡುವುದು, ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ಇತ್ಯಾದಿ ಈ ಯುದ್ಧ ನಿಲುಗಡೆಯ ಕರಡು ಪ್ರತಿಯಲ್ಲಿ ಸೇರಿಲ್ಲ.


