Friday, May 3, 2024
Homeಕರಾವಳಿಉಡುಪಿಮರೆಯಾಗದೆ ಮರೆಯಲಾಗದ ಮಾಣಿಕ್ಯ ‘ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು’: ನಶಿಸುವ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದ ಹೃದಯಕ್ಕಿಂದು ಜನ್ಮದಿನ

ಮರೆಯಾಗದೆ ಮರೆಯಲಾಗದ ಮಾಣಿಕ್ಯ ‘ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು’: ನಶಿಸುವ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದ ಹೃದಯಕ್ಕಿಂದು ಜನ್ಮದಿನ

spot_img
- Advertisement -
- Advertisement -

ಮಕ್ಕಳೊಂದಿಗೆ ಮಕ್ಕಳಾಗಿದ್ದು, ನಶಿಸುವ ಕಲೆಯನ್ನು ಪ್ರೋತ್ಸಾಹಿಸುತ್ತ ಸದಾ ಒಳಿತನ್ನು ಬಯಸುತ್ತಿದ್ದ ಮುಗ್ಧ ಜೀವ ‘ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಜನುಮ ದಿನದ ಸಂಭ್ರಮ ಇಂದು.  

ಜೂನ್ ತಿಂಗಳ ಮೊದಲ ವಾರದಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ಉಡುಪಿಯ ಶಿರೂರು ಮಠದ ಸುತ್ತೆಲ್ಲಾ ನೂರಾರು ವಿದ್ಯಾರ್ಥಿಗಳ ಹಾಗೂ ಅವರ ಪಾಲಕರ ದಂಡು ಸೇರುತ್ತಿತ್ತು. ವಿದ್ಯಾರ್ಥಿಗಳು ಶ್ರೀಶಿರೂರುಮಠದ ಶ್ರೀಲಕ್ಷ್ಮೀವರತೀರ್ಥಶ್ರೀಗಳು ಅನುಗ್ರಹಿಸಿ ನೀಡುತ್ತಿದ್ದ ಪಠ್ಯಪುಸ್ತಕ, ಸಮವಸ್ತ್ರ, ಸ್ಕೂಲ್ ಬ್ಯಾಗ್, ವಿದ್ಯಾರ್ಥಿ ವೇತನಗಳನ್ನು ಖುಷಿಯಿಂದ ಪಡೆಯುತ್ತಿದ್ದರು. ಇದರೊಂದಿಗೆ ನೂರಾರು ಮುಗ್ದ ಹೃದಯಗಳು ನಿರಾಳ ಮನಸ್ಸಿನಿಂದ ಶಾಲೆಗೆ ಹೆಜ್ಜೆ ಹಾಕುತ್ತಿದ್ದವು.

ಒಂದು ಕಾಲದಲ್ಲಿ ನಶಿಸುವ ಹೋಗುವ ಅಂತದಲ್ಲಿದ್ದ ಉಡುಪಿಯ ಕೃಷ್ಣಜಯಂತಿ ಸಂದರ್ಭದ ಪ್ರಮುಖ ಆಕರ್ಷಣೆಗಳಾದ ಹುಲಿವೇಷ ಸೇರಿದಂತೆ ವೈವಿಧ್ಯಮಯ ಜನಪದ ಸಂಸ್ಕೃತಿಯನ್ನು ಸಾರುವ ವೇಷ ಭೂಷಣಗಳು ನಶಿಸುವ ಸಂದರ್ಭದಲ್ಲಿ ಮತ್ತೆ ಆಸರೆ ನೀಡಿ ಪ್ರೋತ್ಸಾಹಿಸಿದವರು ಶ್ರೀ ಲಕ್ಷ್ಮೀವರತೀರ್ಥರು. ಕೃಷ್ಣನ ಉತ್ಸವಕ್ಕೆ ಮತ್ತಷ್ಟು ಮೆರುಗನ್ನು ನೀಡಿ ಹುಲಿವೇಷ ಹಾಗೂ ಬಗೆಬಗೆಯ ಸಾಂಸ್ಕೃತಿಕ ಭೂಷಣಗಳಿಗೆ ಬೃಹತ್ ವೇದಿಕೆಯನ್ನು ಕಲ್ಪಿಸಿದ್ದರು.

ಅಷ್ಟೇ ಅಲ್ಲದೇ ಉತ್ಕೃಷ್ಟ ಗುಣಮಟ್ಟದ ಹಿನ್ನೆಲೆ ಸಂಗೀತ, ಗಣ್ಯರ ಉಪಸ್ಥಿತಿ, ದೂರದರ್ಶನದದಲ್ಲಿ ನೇರಪ್ರಸಾರ, ಆಕರ್ಷಕ ನಗದು, ಪಾರಿತೋಷಕಗಳು ಅಭಿನಂದನೆಗಳನ್ನು ಆಯೋಜಿಸಿದ್ದರು .ಶ್ರೀಪಾದರ ಕಲಾಭಿಮಾನವು ಕಲಾಪ್ರೇಮಿಗಳನ್ನು, ಕಲಾವಿದರನ್ನು ಧನ್ಯರನ್ನಾಗಿಸಿತು.ಇದೆಲ್ಲಾಕ್ಕಿಂತಲೂ ಮುಖ್ಯವಾಗಿ ಕೃಷನನ್ನು ನಿತ್ಯ ಪೂಜಿಸುವ ಯತಿಗಳ ದಿವ್ಯಹಸ್ತದಿಂದ ಪ್ರತಿ ವೇಷಧಾರಿಗಳಿಗೆ ಹೃತ್ಪೂರ್ವಕವಾಗಿ ಅರ್ಪಿಸಲ್ಪಡುತ್ತಿದ್ದ ಸಾವಿರಾರು ರೂಪಾಯಿ ಬೆಲೆಯ ನೋಟುಗಳ ಹಾರಾರ್ಪಣೆಯಿಂದ ವೇಷದಾರಿಗಳ ಮನಸ್ಸು ತುಂಬಿ ಬರುತ್ತಿತ್ತು.

ಮಠಕ್ಕೆ ಆಗಮಿಸುತ್ತಿದ್ದ ಬಹುತೇಕ ಭಕ್ತರು ಶ್ರೀಪಾದರ ಸ್ಪರ್ಶದಿಂದ ಭಾವುಕರಾಗುತ್ತಿದ್ದರು. ವಿಠಲಪಿಂಡಿಯಂದು ಕೃಷ್ಣನ ಉತ್ಸವ 4 ಗಂಟೆಗೆ ಮುಗಿಯುತ್ತಿದ್ದಂತೆ ಜನಸ್ತೋಮವು ಶಿರೂರು ಶ್ರೀಪಾದರ ಅನ್ನವಿಠಲ ವೇದಿಕೆಯತ್ತ ಮುನ್ನುಗ್ಗುತ್ತಿತ್ತು. ಸತತ 25 ವರುಷಗಳಿಂದ ಕೃಷ್ಣಜಯಂತಿಯ ಸಂದರ್ಭದಲ್ಲಿ ಬಹುವೈಭವದಿಂದ ಆಯೋಜನೆಗೊಳ್ಳುತ್ತಿದ್ದ ಈ ಉತ್ಸಾಹದ ಉತ್ಸವವು ಇಂದು ಮರೆಯಾಗಿದೆ. ನೂರಾರು ವೇಷಧಾರಿಗಳಿಗೆ ಕಲಾವಿದರಿಗೆ ಕಲಾ ಪ್ರೇಮಿಗಳಿಗೆ ಶ್ರೀಪಾದರ ಅಗಲಿಕೆ ತುಂಬಲಾರದ ನೋವನ್ನುಂಟು ಮಾಡುತ್ತಿದೆ ಎಂಬುದು ನಿಜ.

ಇನ್ನೂ ಪ್ರತೀ ತಿಂಗಳು ಅನಾರೋಗ್ಯ ಪೀಡಿತರಿಗೆ  ಶ್ರೀಶಿರೂರುಶ್ರೀಯವರು ಹರಸಿ, ನಿಷ್ಕಲ್ಮಶ ಮನಸ್ಸಿನಿಂದ ನೀಡುತ್ತಿದ್ದ ಆರೋಗ್ಯ ನಿಧಿಯು ಸಾವಿರಾರು ರೋಗಿಗಳ ಬದುಕಿಗೆ ಸಂಜೀವಿನಿಯಾಗಿತ್ತು. ಆದರೆ ಇಂದು ಈ ಸೇವೆ, ಸಹಾಯ, ಆಸರೆ ಎಲ್ಲವೂ ದೂರವಾಗಿದೆ. ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಕ್ರೀಡಾಪಟುಗಳಿಗೆ, ಪ್ರಶಸ್ತಿ ವಿಜೇತರಿಗೆ, ಸಾಧಕರಿಗೆ ಮಠ ಮಂದಿರಗಳಿಗೆ, ಸಂಘ ಸಂಸ್ಥೆಗಳಿಗೆ  ಶ್ರೀಪಾದರಿಂದ ಸದಾ ಏನಾದರೊಂದು ಕೊಡುಗೆಗಳು ಸಲ್ಲುತ್ತಲೇ ಇರುತ್ತಿತ್ತು. ಈಗ ಇವೆಲ್ಲವೂ ನೆನಪು ಮಾತ್ರ. ಆದರೆ ಒಂದಂತೂ ಸತ್ಯ. ಭಗವಂತನ ಪೂಜೆ ಪುರಸ್ಕಾರಗಳ ಜೊತೆಗೆ ಜನ ಸೇವೆಯಲ್ಲೂ ಸಂತಸ ಕಾಣುತ್ತಿದ್ದ ಶ್ರೀಪಾದರು ಬಡವ ಬಲ್ಲಿದನೆಂಬ ಬೇಧವಿಲ್ಲದೆ ಜಾತಿಮತ ಮೀರಿನಿಂತಿದ್ದ ಅಪೂರ್ವ ಶಕ್ತಿಯಾಗಿದ್ದರು.

ನಿಸ್ಸಂಶಯವಾಗಿ ಶಿರೂರು ಶ್ರೀಪಾದರು ಬಡವರ ಬಂಧು, ಹಾಗೂ ಪ್ರೀತಿ ಪ್ರೇಮ ಸಮಾನತೆಯ ಪ್ರತೀಕವಾಗಿದ್ದರು. ಅವರ ಸೇವೆ, ಸಾಧನೆ, ಶುದ್ಧಮನಸ್ಸು ಅನರ್ಘ್ಯರತ್ನದಂತೆ ನಿರಂತರ ಮಿನುಗುತ್ತಿರುತ್ತದೆ. ಅವರು ನಮ್ಮೆಲ್ಲರೊಂದಿಗೆ ಎಂದಿಗೂ, ಎಂದೆಂದಿಗೂ ಜನ ಮಾನಸದಿಂದ ಮರೆಯಾಗದವರು ಹಾಗೂ ಮರೆಯಲಾಗದವರು. ಸದಾ ನಮ್ಮೊಡನೆಯೇ ಇರುವ ಅಪರೂಪದ ಮಾಣಿಕ್ಯ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು.

- Advertisement -
spot_img

Latest News

error: Content is protected !!