Friday, October 9, 2026
Homeಅಪರಾಧಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ, ಹಣಕ್ಕೆ ಬೇಡಿಕೆ

ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ, ಹಣಕ್ಕೆ ಬೇಡಿಕೆ

- Advertisement -
- Advertisement -

ಉಡುಪಿ: ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ವಾಟ್ಸ್‌ಆ್ಯಪ್ ಕರೆಗಳು ಬರುತ್ತಿರುವುದಾಗಿ ವರದಿಯಾಗಿದೆ. ಈ ಸಂಬಂಧ ಉಡುಪಿ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳು ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.

ಹತ್ಯೆಗೀಡಾದ ಉದ್ಯಮಿ ಡೇವಿಡ್ ಡಿಸೋಜಾ ಅವರ ಪುತ್ರನಿಗೆ ವಾಟ್ಸ್‌ಆ್ಯಪ್ ಕರೆ ಮಾಡಿರುವ ವ್ಯಕ್ತಿಯೊಬ್ಬ, ₹5 ಕೋಟಿ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ ಎನ್ನಲಾಗಿದೆ. ತಂದೆಯಿಂದ ತನ್ನ ಸಹೋದರನಿಗೆ ನಷ್ಟವಾಗಿದ್ದು, ಅದನ್ನು ಭರಿಸಲು ಹಣ ನೀಡಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಶಿರ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ರೀತಿ, ಮತ್ತೊಬ್ಬ ಉದ್ಯಮಿ ಹಾಗೂ ಖಾಸಗಿ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ವ್ಯಕ್ತಿಗೂ ಹೇಮಂತ್ ಪೂಜಾರಿ ಹೆಸರಿನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇಂತಹ ಕರೆಗಳು ಬಂದಿರುವ ಬಗ್ಗೆ ವರದಿಯಾಗಿದೆ.

ಕಳೆದ 25 ವರ್ಷಗಳಿಂದ ಪೊಲೀಸರು ಹೇಮಂತ್ ಪೂಜಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹತ್ಯೆ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಹೇಮಂತ್ ಪೂಜಾರಿ ಪತ್ತೆಯಾಗಿಲ್ಲ. ಇದೀಗ ಆತನ ಹೆಸರಿನಲ್ಲಿ ಬರುತ್ತಿರುವ ಬೆದರಿಕೆ ಕರೆಗಳು ಪೊಲೀಸರ ಆತಂಕಕ್ಕೆ ಕಾರಣವಾಗಿವೆ.

ಈ ಕರೆಗಳ ಹಿಂದೆ ನಿಜವಾಗಿಯೂ ಹೇಮಂತ್ ಪೂಜಾರಿಯ ಕೈವಾಡವಿದೆಯೇ ಅಥವಾ ಆತನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಪರಿಚಿತರು ಹಣ ಸುಲಿಗೆಗೆ ಯತ್ನಿಸುತ್ತಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!