ಮಂಗಳೂರು:ನಗರದ ಮಲ್ಲಿಕಟ್ಟೆಯಲ್ಲಿರುವ ಸಾರ್ವಜನಿಕ ಪಾರ್ಕ್‌ನಲ್ಲಿದ್ದ ಖ್ಯಾತ ಸ್ಯಾಕ್ಸೋಫೋನ್ ವಾದಕ ದಿವಂಗತ ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 60ರಿಂದ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗಿದ್ದ ಈ ಪಾರ್ಕ್‌ನಲ್ಲಿ ಈ ಪ್ರತಿಕೃತಿಯನ್ನು ಗೌರವಾರ್ಥವಾಗಿ ಸ್ಥಾಪಿಸಲಾಗಿತ್ತು. ಆದರೆ, ಸೂಕ್ತ ಭದ್ರತೆ ಇಲ್ಲದ ಕಾರಣ ಕಳ್ಳರು ಇದನ್ನು ಎಗರಿಸಿದ್ದು, ಘಟನೆ ನಡೆದು ಹಲವು ದಿನಗಳಾದರೂ ಪ್ರತಿಕೃತಿ ಪತ್ತೆಯಾಗಿಲ್ಲ.
ಇದಷ್ಟೇ ಅಲ್ಲದೆ, ಪಾರ್ಕ್‌ನಲ್ಲಿ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದ್ದು, ಕಸದ ರಾಶಿ, ಕುಡಿಯುವ ನೀರು ಪೋಲಾಗುತ್ತಿರುವುದು, ಇಲಿಗಳ ಕಾಟ ಹಾಗೂ ರಾತ್ರಿ ವೇಳೆ ಮದ್ಯಪಾನಿಗಳ ಹಾವಳಿ ಹೆಚ್ಚಾಗಿದೆ. ಮಹಾನ್ ಕಲಾವಿದನಿಗೆ ಗೌರವವಾಗಿ ಸ್ಥಾಪಿಸಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ತಕ್ಷಣ ಪತ್ತೆಹಚ್ಚಿ ಪುನಃ ಸ್ಥಾಪಿಸಬೇಕು ಹಾಗೂ ಪಾರ್ಕ್‌ಗೆ ಸೂಕ್ತ ಭದ್ರತೆ ಮತ್ತು ನಿರ್ವಹಣೆ ಒದಗಿಸಬೇಕೆಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.


