Saturday, November 7, 2026
Homeಕರಾವಳಿಉಡುಪಿಮಲೇಷ್ಯಾದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿ ವಶಕ್ಕೆ..!!; ಉಡುಪಿ ಉದ್ಯಮಿಗಳಿಗೆ ಹಣಕ್ಕಾಗಿ ಬೆದರಿಕೆ; ಮುಂಬೈ ಪೊಲೀಸರಿಂದ...

ಮಲೇಷ್ಯಾದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿ ವಶಕ್ಕೆ..!!; ಉಡುಪಿ ಉದ್ಯಮಿಗಳಿಗೆ ಹಣಕ್ಕಾಗಿ ಬೆದರಿಕೆ; ಮುಂಬೈ ಪೊಲೀಸರಿಂದ ಕಾರ್ಯಾಚರಣೆ

- Advertisement -
- Advertisement -

ಉಡುಪಿ: ಜಿಲ್ಲೆಯ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಮಲೇಷ್ಯಾದಲ್ಲಿ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಹೇಮಂತ್ ಪೂಜಾರಿ ಅಲಿಯಾಸ್ ‘ಎಚ್.ಪಿ.’ ಉಡುಪಿ ಜಿಲ್ಲೆಯ 17ಕ್ಕೂ ಹೆಚ್ಚು ಬಿಲ್ಡರ್‌ಗಳು, ಹೋಟೆಲ್ ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ದೊಡ್ಡ ಕಂಪೆನಿಗಳ ಮುಖ್ಯಸ್ಥರಿಗೆ ಅಂತರರಾಷ್ಟ್ರೀಯ ಮೊಬೈಲ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.

ಕಳೆದ ಸೆಪ್ಟೆಂಬರ್‌ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಹೇಮಂತ್ ಪೂಜಾರಿಯ ಸಹಚರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 10 ಆರೋಪಿಗಳನ್ನು ಬಂಧಿಸಿದ್ದಾರೆ. ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯನ್ನಾಗಿ ಹೆಸರಿಸಿ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದಲ್ಲದೆ, ಕಳೆದ ಅಕ್ಟೋಬರ್‌ನಲ್ಲಿ ಹೇಮಂತ್ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು. ಸ್ಥಳೀಯ ಉದ್ಯಮಿಗಳ ಮಾಹಿತಿ ಮತ್ತು ಮೊಬೈಲ್ ಸಂಖ್ಯೆಗಳನ್ನು ಆತನಿಗೆ ನೀಡುತ್ತಿದ್ದ ಆರೋಪದ ಮೇಲೆ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಹಾಗೂ ಸಾಂತೂರಿನ ಹರೀಶ್ ಪೂಜಾರಿ (45) ಅವರನ್ನು ಪೊಲೀಸರು ಬಂಧಿಸಿದ್ದರು.

ತನ್ನ ಸಹಚರರ ಬಂಧನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೂ ಹೇಮಂತ್ ಪೂಜಾರಿ ಬೆದರಿಕೆ ಹಾಕಿದ್ದ ಎಂಬ ಆರೋಪವೂ ಕೇಳಿಬಂದಿತ್ತು.

ಈ ನಡುವೆ, ಬೆದರಿಕೆಗೆ ಒಳಗಾಗಿದ್ದ ಉಡುಪಿಯ ಉದ್ಯಮಿಯೊಬ್ಬರು ಪ್ರಭಾವಿ ವ್ಯಕ್ತಿಗಳ ಮೂಲಕ ಹೇಮಂತ್ ಪೂಜಾರಿಯನ್ನು ಪತ್ತೆಹಚ್ಚುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆ ‘ರಾ’ (RAW) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ವೇಳೆ ಹೇಮಂತ್ ಪೂಜಾರಿ ಮಲೇಷ್ಯಾದಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ. ಬಳಿಕ ಆತನ ಆಪ್ತನೊಬ್ಬನನ್ನು ಮುಂಬೈನಿಂದ ಮಲೇಷ್ಯಾಕ್ಕೆ ಕರೆದೊಯ್ದ ಪೊಲೀಸರು, ಆತನ ನೆರವಿನಿಂದ ಕಾರ್ಯಾಚರಣೆ ನಡೆಸಿ ಹೇಮಂತ್ ಪೂಜಾರಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಹೇಮಂತ್ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದ್ದು, ಈ ಕುರಿತು ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!