
ಮಂಗಳೂರು:: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಇಬ್ಬರು ಕಳ್ಳರು ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಂಗಾರದ ಸರ ಹಾಗೂ ಬಳೆಯನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಕಾಯರಗೋಳಿಯಲ್ಲಿ ನಡೆದಿದೆ.
ಕಾಯರಗೋಳಿ ನಿವಾಸಿ ಭವಾನಿ ಎಂಬವರೇ ದರೋಡೆಕೋರರ ಕೃತ್ಯಕ್ಕೆ ಒಳಗಾದ ವೃದ್ಧೆ. ಆಗಸ್ಟ್ 3ರಂದು ಮಧ್ಯಾಹ್ನ ಸುಮಾರು 1.15ಕ್ಕೆ ಭವಾನಿ ಅವರ ಮಗ ಕೆಲಸಕ್ಕೆ ತೆರಳಿದ್ದ ವೇಳೆ ಮನೆಗೆ ಬಂದ ಇಬ್ಬರು ಯುವಕರು, “ನಾವು ಇನ್ಫೋಸಿಸ್ ನೌಕರರು, ನಮಗೆ ಬಾಡಿಗೆ ಮನೆ ಬೇಕು. ಬ್ರಾಹ್ಮಣರಿಗೆ ಮನೆ ಇದೆಯೇ?” ಎಂದು ವಿಚಾರಿಸಿದ್ದಾರೆ. ಅದಕ್ಕೆ ವೃದ್ಧೆ “ಮಗ ಬಂದ ಮೇಲೆ ಕೇಳಿ ಹೇಳುತ್ತೇನೆ” ಎಂದಾಗ, ಮಗನ ಫೋನ್ ನಂಬರ್ ಕೇಳಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ವೃದ್ಧೆ ಬಾಗಿಲು ಹಾಕಲು ಯತ್ನಿಸಿದಾಗ, ಆರೋಪಿಗಳು ಬಾಗಿಲನ್ನು ರಭಸದಿಂದ ನೂಕಿ ಒಳನುಗ್ಗಿದ್ದಾರೆ.
ಈ ವೇಳೆ ಹಾಲ್ನಲ್ಲಿ ಕೆಳಗೆ ಬಿದ್ದು ಬೊಬ್ಬೆ ಹೊಡೆದ ವೃದ್ಧೆಯ ಬಾಯಿಯನ್ನು ಒಬ್ಬ ಆರೋಪಿ ಗಟ್ಟಿಯಾಗಿ ಒತ್ತಿ ಹಿಡಿದರೆ, ಮತ್ತೊಬ್ಬ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಹಾಗೂ ಬಲಕೈಯಲ್ಲಿದ್ದ 8 ಗ್ರಾಂ ತೂಕದ ಬಂಗಾರದ ಬಳೆಯನ್ನು ಬಲವಂತವಾಗಿ ಎಳೆದೊಯ್ದಿದ್ದಾನೆ. ಎಡಕೈಯಲ್ಲಿದ್ದ ಬಳೆಯನ್ನೂ ಎಳೆಯಲು ಯತ್ನಿಸಿ ಅದು ಸಾಧ್ಯವಾಗದಿದ್ದಾಗ, ವೃದ್ಧೆಗೆ ಗಾಯಗೊಳಿಸಿ ಮನೆಯ ಹೊರಗಿನಿಂದ ಚಿಲಕ ಹಾಕಿ ಪರಾರಿಯಾಗಿದ್ದಾರೆ.
ದರೋಡೆಕೋರರ ಹಲ್ಲೆಯಿಂದ ವೃದ್ಧೆಯ ಕೈ ಮತ್ತು ಮಣಿಗಂಟಿಗೆ ತೀವ್ರ ತರಚಿದ ಗಾಯಗಳಾಗಿವೆ. ಲೂಟಿಯಾದ ಬಂಗಾರದ ಒಟ್ಟು ಮೌಲ್ಯ ಸುಮಾರು ₹3 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ಅರ್ಧ ಗಂಟೆಯ ನಂತರ ಮಗಳು ಪ್ರತಿಭಾ ಮನೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


