
ನವದೆಹಲಿ: ಯೆಮನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತೀಯ ಧ್ವಜ ಹೊಂದಿದ್ದ ‘ಎಂಎಸ್ವಿ ಫೈಜ್ ನೂರ್ ಓಲಿಯಾ’ ಎಂಬ ವಾಣಿಜ್ಯ ಹಡಗಿನ ಮೇಲೆ ಆಗಸ್ಟ್ 4ರಂದು ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.
ದಾಳಿಯ ಪರಿಣಾಮವಾಗಿ ಹಡಗು ಸಮುದ್ರದಲ್ಲಿ ಮುಳುಗಿದೆಯಾದರೂ, ಅದರಲ್ಲಿದ್ದ ಎಲ್ಲಾ 13 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಿಬ್ಬಂದಿಯ ಕ್ಷೇಮಕ್ಕಾಗಿ ಯೆಮನ್ ಅಧಿಕಾರಿಗಳೊಂದಿಗೆ ಸತತ ಸಮನ್ವಯ ಸಾಧಿಸುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಂಪೂರ್ಣ ನೆರವು ನೀಡಿದ ಯೆಮನ್ ಸರ್ಕಾರಕ್ಕೆ ಭಾರತ ಧನ್ಯವಾದ ಅರ್ಪಿಸಿದೆ.
ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಇಂತಹ ದಾಳಿಗಳು ತೀವ್ರ ಆತಂಕಕಾರಿ ಎಂದಿರುವ ಭಾರತ, ಕಡಲ ಮಾರ್ಗಗಳಲ್ಲಿ ಮುಕ್ತ ವಾಣಿಜ್ಯ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಈ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದೆ.


