ಉಡುಪಿ; ಬೆಂಗಳೂರಿನಲ್ಲಿ ನೆಲೆಸಿದ್ದ ಕೋಟೇಶ್ವರದ ರಥಬೀದಿ ದೊಡ್ಡೋಣಿ ನಿವಾಸಿ, ಪ್ರತಿಭಾನ್ವಿತ ಆಲ್ರೌಂಡರ್ ಜೀವನ್ (42) ಅವರು ತೀವ್ರ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
ನಿವೃತ್ತ ವಿಶೇಷ ಜಿಲ್ಲಾಧಿಕಾರಿ ನಾಗರಾಜ್ ಮಿತ್ಯಂತಾಯ ಅವರ ಪುತ್ರರಾಗಿರುವ ಜೀವನ್, ಕೋಟೇಶ್ವರ ನ್ಯಾರಂಬಳ್ಳಿ ಡಾ. ಸಬಿತಾ ಆಚಾರ್ಯ ಅವರ ಸಹೋದರಿಯ ಪುತ್ರ. ಮೃತರು ಪತ್ನಿ ಹಾಗೂ 11 ವರ್ಷದ ಪುತ್ರನನ್ನು ಅಗಲಿದ್ದಾರೆ.
ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ಇದ್ದ ವೇಳೆ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ‘ವಿಜಯ ಕ್ರಿಕೆಟರ್ಸ್ ಕೋಟೇಶ್ವರ’ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅತ್ಯುತ್ತಮ ಆಲ್ರೌಂಡರ್ ಆಗಿದ್ದ ಜೀವನ್, ಅನೇಕ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ಕೋಟೇಶ್ವರದ ಒಡನಾಡಿಗಳು ಹಾಗೂ ಕ್ರೀಡಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಅಕ್ಟೋಬರ್ 22ರ ಸಂಜೆ ಕೋಟೇಶ್ವರದ ನಿವಾಸಕ್ಕೆ ತರಲಾಗಿದ್ದು, ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


