ಹುಬ್ಬಳ್ಳಿ: ಬೆಳಗಾವಿ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲೂ ಗಾಳಿಪಟ ಹಾರಿಸುವ ಮಾರಕ ಮಾಂಜಾ ದಾರಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಭರತ್ ನಗರದ ನಿವಾಸಿ, ಲ್ಯಾಬ್ ಟೆಕ್ನಿಷಿಯನ್ ವಿದ್ಯಾ ಮಂಜುನಾಥ ಗೌಡರ (38) ಮೃತ ದುರ್ದೈವಿ.
ಘಟನೆಯ ವಿವರ:
ವಿದ್ಯಾ ಅವರು ಬೆಳಿಗ್ಗೆ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಕಾರವಾರ ರಸ್ತೆಯ ಶಿವಶಂಕರ ಕಾಲೋನಿ ಬಳಿ ಮಾಂಜಾ ದಾರ ದಿಢೀರ್ ಕುತ್ತಿಗೆಗೆ ಸುತ್ತಿಕೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಬಂಧ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಮಾಂಜಾ ದಾರ ಮಾರಾಟ ಮಾಡುವ ಹಾಗೂ ಬಳಸುವವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


