ಉಡುಪಿ: 2028ರ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೂ ರಾಜಕೀಯ ಪಕ್ಷದಿಂದ ಸ್ಪರ್ಧಿಸಬೇಕೇ ಅಥವಾ ಪಕ್ಷೇತರನಾಗಿ ಕಣಕ್ಕಿಳಿಯಬೇಕೇ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತೊಮ್ಮೆ ಆಹ್ವಾನಿಸಿದರೆ ಸಂತೋಷದಿಂದ ಪಕ್ಷಕ್ಕೆ ವಾಪಸಾಗುವುದಾಗಿ ತಿಳಿಸಿದ್ದಾರೆ.
ಸದ್ಯ ತಾನು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಹಿಂದೆ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯಲ್ಲಿದ್ದಾಗ ಪಕ್ಷದ ಸಿದ್ಧತೆಗಳೊಂದಿಗೆ ಮುನ್ನಡೆದಿದ್ದೆ ಎಂದು ಸ್ಮರಿಸಿದ್ದಾರೆ.
ಭವಿಷ್ಯದ ರಾಜಕೀಯ ಹೆಜ್ಜೆಗಳ ಕುರಿತು ಮಾತನಾಡುತ್ತಾ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧಾರ ಕೈಗೊಂಡ ತಕ್ಷಣ ಮಾಧ್ಯಮಗಳಿಗೆ ತಿಳಿಸುವುದಾಗಿ ಹೇಳಿದರು. ಅದಕ್ಕೂ ಮುನ್ನ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳ ಅಭಿಪ್ರಾಯ ಪಡೆಯುವುದಾಗಿ ತಿಳಿಸಿದ ಅವರು, ಪಕ್ಷೇತರನಾಗಿ ಸ್ಪರ್ಧಿಸುವುದಾದರೆ ಬೆಂಬಲಿಗರೊಂದಿಗೆ ಚರ್ಚಿಸುವುದು ಅನಿವಾರ್ಯ ಎಂದರು.
ಪಕ್ಷ ತೊರೆದು ಹೋದ ನಾಯಕರನ್ನು ಮರಳಿ ಸೇರಿಸಿಕೊಳ್ಳುವ ಕುರಿತು ರಾಜ್ಯ ಮಟ್ಟದ ನಾಯಕರು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೂ, ಪಕ್ಷದಿಂದ ಅಧಿಕೃತವಾಗಿ ಕರೆ ಬಂದರೆ ಖುಷಿಯಿಂದ ಸೇರ್ಪಡೆಗೊಳ್ಳುವುದಾಗಿ ರಘುಪತಿ ಭಟ್ ಪುನರುಚ್ಚರಿಸಿದ್ದಾರೆ. ಸದ್ಯ ಯಾವುದೇ ಅವಸರದ ನಿರ್ಧಾರಗಳನ್ನು ಕೈಗೊಳ್ಳದೆ, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮಾಲೋಚನೆಯ ಬಳಿಕವಷ್ಟೇ ಮುಂದಿನ ರಾಜಕೀಯ ನಡೆ ಬಗ್ಗೆ ಸ್ಪಷ್ಟನೆ ನೀಡುವುದಾಗಿ ಅವರು ತಿಳಿಸಿದ್ದಾರೆ.


