Tuesday, August 25, 2026
Homeಕರಾವಳಿಮಂಗಳೂರುಉಡುಪಿ: ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿ ದುರಂತ ಸಾವು

ಉಡುಪಿ: ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿ ದುರಂತ ಸಾವು

- Advertisement -
- Advertisement -

ಉಡುಪಿ: ನಗರದ ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ನಿವಾಸಿ ಕೃಷ್ಣ ನಾಯಕ್ ಎಂಬವರ ಪುತ್ರ ಆದಿತ್ಯ ನಾಯಕ್ (15) ಮೃತಪಟ್ಟ ದುರ್ದೈವಿ.

ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮದ ಪ್ರಯುಕ್ತ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದನು. ಈ ಸಂದರ್ಭದಲ್ಲಿ ಕೆರೆಯಲ್ಲಿ ಇತರ ಭಕ್ತರು ಈಜಾಡುತ್ತಿದ್ದುದನ್ನು ನೋಡಿ ಆದಿತ್ಯ ಕೂಡ ನೀರಿಗಿಳಿದಿದ್ದನು. ಆತನ ಜೊತೆಯಲ್ಲಿದ್ದ ಸಂಬಂಧಿಗೆ ಈಜು ಬಾರದ ಕಾರಣ ಆತ ದಡದಲ್ಲೇ ನಿಂತುಕೊಂಡಿದ್ದನು. ಆದರೆ, ಕೆರೆಯ ಮಧ್ಯಭಾಗಕ್ಕೆ ಈಜಿಕೊಂಡು ಹೋದ ಆದಿತ್ಯ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದನು.

ಘಟನೆ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಆಡಳಿತ ಮಂಡಳಿಯವರು ತಕ್ಷಣವೇ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಈಶ್ವರ ಮಲ್ಪೆ ಹಾಗೂ ಅವರ ತಂಡ ಕೆರೆಯಲ್ಲಿ ಸುದೀರ್ಘ ಕಾರ್ಯಾಚರಣೆ ನಡೆಸಿ ಆದಿತ್ಯನನ್ನು ನೀರೊಳಗಿನಿಂದ ಮೇಲಕ್ಕೆತ್ತಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.

- Advertisement -

Latest News

error: Content is protected !!