ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ (ರಿ.) ವಿಶೇಷ ಸಭೆಯು ಇಲ್ಲಿನ ವಕೀಲರ ಭವನದಲ್ಲಿ ಜಿಲ್ಲಾ ಅಧ್ಯಕ್ಷರಾದ ರಿಚರ್ಡ್ ಡಿ ಕೊಸ್ತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯ ಮುಂದಿನ ರೂಪುರೇಷೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಇದರೊಂದಿಗೆ ವಕೀಲರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಸೊಸೈಟಿ ರಚಿಸುವ ಕುರಿತು ಹಾಗೂ ಜಿಲ್ಲೆಯ ವಿವಿಧ ವಕೀಲರ ಸಂಘಗಳ ಅಭಿವೃದ್ಧಿ ಮತ್ತು ಇತರ ಹಿತರಕ್ಷಣಾ ವಿಷಯಗಳ ಬಗ್ಗೆ ಕೂಲಂಕಷವಾಗಿ ಸಮಾಲೋಚನೆ ನಡೆಸಲಾಯಿತು.
ಈ ವಿಶೇಷ ಸಭೆಯಲ್ಲಿ ಮಂಗಳೂರು ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರಾಘವೇಂದ್ರ ಹೆಚ್.ವಿ., ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕುರ್ತುಕುಳಿ, ಮೂಡಬಿದಿರೆ ಸಂಘದ ನಿಕಟಪೂರ್ವ ಅಧ್ಯಕ್ಷ ಹರೀಶ್, ಜಗನ್ನಾಥ ರೈ, ದಯಾನಂದ್, ಬೆಳ್ತಂಗಡಿ ಸಂಘದ ನಿಕಟಪೂರ್ವ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಜೊತೆ ಕಾರ್ಯದರ್ಶಿ ನವೀನ್ ಬಿ.ಕೆ. ಉಪಸ್ಥಿತರಿದ್ದರು.
ಅಲ್ಲದೆ, ಸಂಘದ ಸದಸ್ಯರುಗಳಾದ ಮನೋಹರ್ ಕುಮಾರ್ ಎ., ಶ್ರೀನಿವಾಸ ಗೌಡ ಬೆಳಾಲು ಮತ್ತು ನರೇಂದ್ರ ಬಂಟ್ವಾಳ ಸಭೆಯಲ್ಲಿ ಭಾಗವಹಿಸಿದ್ದರು.


