ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿಯಲ್ಲಿ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಆಶ್ರಯ ನೀಡಿದವ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ನ ಕಾನಾದ ಕಟ್ಲ ಮನೆ ನಿವಾಸಿ ಸುಶಾಂತ್ @ ಕಡವಿ(29), ಕಾನಾ ಕಟ್ಲ ನಿವಾಸಿ ಕೆ ವಿ ಅಲೆಕ್ಸ್(27), ಸುರತ್ಕಲ್ ನ ಇಂದಿರಾಕಟ್ಟೆ ನಿವಾಸಿ ನಿತಿನ್(26) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಸುರತ್ಕಲ್ ನ ಕುಳಾಯಿಗುಡ್ಡೆ ನಿವಾಸಿ ಆರುಣ್ ಶೆಟ್ಟಿ(56) ಬಂಧಿತರು.
ಈ ಪೈಕಿ ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಹಾಗೂ ಆರೋಪಿಗಳಿಗೆ ಅರುಣ್ ಶೆಟ್ಟಿಯೊಂದಿಗೆ ಅಶ್ರಯ ನೀಡಿದ ಅಶೋಕ್ ಎಂಬಾತನು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಪ್ರಕರಣದ ಆರೋಪಿತರ ಪತ್ತೆಯ ಬಗ್ಗೆ ಶ್ರೀ ರವಿಶಂಕರ್, ಮಾನ್ಯ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ಪಿಎಸ್ಐ ಗಳಾದ ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐ ರವರಾದ ರಾಜೇಶ್ ಆಳ್ವ, ತಾರನಾಥ, ರಾಧಾಕೃಷ್ಣ, ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಅಜಿತ್ ಮ್ಯಾಥ್ಯೂ, ರಾಮು ಕೆ, ಕಾರ್ತೀಕ್, ವಿನೋದ್ ರವರು ಹಾಗೂ ಸಿಸಿಬಿ ಘಟಕದ ಅಧಿಕಾರಿ/ಸಿಬ್ಬಂದಿಯವರು ಹಾಗೂ ಎಸ್ ಎ ಎಫ್ ತಂಡದವರು ಮತ್ತು ಶ್ವಾನ ದಳದವರು ಆರೋಪಿಗಳ ಪತ್ತೆಯ ಬಗ್ಗೆ ಹಾಗೂ ತನಿಖೆಯ ಬಗ್ಗೆ ಭಾಗವಹಿಸಿರುತ್ತಾರೆ.


