ಸುಳ್ಯ: ಕಲ್ಮಡ್ಕ ಗ್ರಾಮದ ಹೊಳೆಕ್ಕರೆ ಎಂಬಲ್ಲಿ ತೋಡಿನಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ನೆರವಾದ ಆರೋಪದ ಮೇಲೆ ಎಣ್ಮೂರು ಗ್ರಾಮದ ಕಲ್ಲೇರಿ ನಿವಾಸಿ ರಮೇಶನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಹೊಳೆಕ್ಕರೆಯ ತೋಟದ ಮಾಲೀಕ ಮಧುಸೂದನ್ ಭಟ್ ಅವರ ತೋಟದ ಸಮೀಪ ಅ. 12ರ ರಾತ್ರಿ ಈ ಘಟನೆ ನಡೆದಿತ್ತು. ತೋಡಿನಲ್ಲಿ ಮೀನು ಹಿಡಿಯಲು ತೆರಳಿದ್ದ ಕಲ್ಮಡ್ಕದ ಭರತ್ (28) ಹಾಗೂ ಅವರ ಭಾವ, ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಮುಂಗೇಲು ಮನೆ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36), ಹೊಳೆಯ ಕಡೆಗೆ ಇಳಿಬಿಡಲಾಗಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ಮೃತಪಟ್ಟಿದ್ದರು. ಅವರೊಂದಿಗೆ ಇದ್ದ ಅಪ್ರಾಪ್ತ ಬಾಲಕನಿಗೂ ಗಾಯಗಳಾಗಿದ್ದು, ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕ ಮಧುಸೂದನ್ ಭಟ್ ಹಾಗೂ ಅಕ್ರಮ ವಿದ್ಯುತ್ ಸಂಪರ್ಕದ ತಂತಿ ಅಳವಡಿಸಲು ನೆರವಾದ ಆರೋಪದ ಮೇಲೆ ರಮೇಶ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಪೊಲೀಸರು ನಡೆಸಿದ ಹುಡುಕಾಟದ ವೇಳೆ ರಮೇಶ ಸಿಕ್ಕಿಬಿದ್ದಿದ್ದು, ಪ್ರಮುಖ ಆರೋಪಿ ತೋಟದ ಮಾಲೀಕ ಮಧುಸೂದನ್ ಭಟ್ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


