Thursday, October 22, 2026
Homeಕರಾವಳಿಮಂಗಳೂರುಮಂಗಳೂರು; ಬೋಳಿಯಾರ್ ನಲ್ಲಿ ಪಿಕಪ್ –ಬೈಕ್ ಮಧ್ಯೆ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್:  ಕೊಲೆಗೈದ...

ಮಂಗಳೂರು; ಬೋಳಿಯಾರ್ ನಲ್ಲಿ ಪಿಕಪ್ –ಬೈಕ್ ಮಧ್ಯೆ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್:  ಕೊಲೆಗೈದ ಆರೋಪಿಯ ಬಂಧನ

- Advertisement -
- Advertisement -

ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಅಕ್ಟೋಬರ್ 19ರಂದು ಸ್ಕೂಟರ್‌ಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆಸಿ ಇಬ್ಬರು ಯುವಕರನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೋಳಿಯಾರ್ ಗ್ರಾಮದ ನಿವಾಸಿ ಹಫೀಝ್ ಯಾನೆ ಅಪ್ಪಿ ಬಂಧಿತ ಪಿಕಪ್ ಚಾಲಕ. ಈ ಭೀಕರ ಕೃತ್ಯದಲ್ಲಿ ಕಿನ್ಯಾ ಅರಬಿ ನಗರದ ಮುಹಮ್ಮದ್ ಅರ್ಫಾಝ್ ಹಾಗೂ ಕಿನ್ಯಾ ಉಕ್ಕುಡದ ಮುಹಮ್ಮದ್ ಜುನೈದ್ ದಾರುಣವಾಗಿ ಮೃತಪಟ್ಟಿದ್ದರು.

ಘಟನೆಯ ಹಿನ್ನೆಲೆ:

ಅಕ್ಟೋಬರ್ 19ರಂದು ಯುವಕರು ತೆರಳುತ್ತಿದ್ದ ಸ್ಕೂಟರ್‌ಗೆ ಪಿಕಪ್ ವಾಹನದಿಂದ ಹಿಂಬದಿಯಿಂದ ಭೀಕರವಾಗಿ ಢಿಕ್ಕಿ ಹೊಡೆಸಲಾಗಿತ್ತು. ಈ ಕೃತ್ಯದಲ್ಲಿ ಅರ್ಫಾಝ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಜುನೈದ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೊನೆಯುಸಿರೆಳೆದಿದ್ದರು.ಆರಂಭದಲ್ಲಿ ಇದು ಕೇವಲ ರಸ್ತೆ ಅಪಘಾತ ಎಂದು ಭಾವಿಸಲಾಗಿದ್ದರೂ, ಪೊಲೀಸರ ಆಳವಾದ ತನಿಖೆಯ ವೇಳೆ ಇದೊಂದು ಪೂರ್ವಪರ ವೈಷಮ್ಯದಿಂದ ನಡೆದ ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗಗೊಂಡಿತ್ತು. ಕೂಡಲೇ ಎಚ್ಚೆತ್ತ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ತಲೆಮರೆಸಿಕೊಂಡಿದ್ದ ಆರೋಪಿ ಹಫೀಝ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಸ್ಥಳ ಮಹಜರು ವೇಳೆ ಹಲ್ಲೆ ಯತ್ನ:

ಬಂಧಿತ ಆರೋಪಿಯನ್ನು ಕೃತ್ಯ ನಡೆದ ಸ್ಥಳದ ಮಹಜರು ತಯಾರಿಸಲು ಪೊಲೀಸರು ಕರೆದೊಯ್ದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಬೋಳಿಯಾರು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಪಂಚರ ಸಮಕ್ಷಮದಲ್ಲಿ ಆರೋಪಿ ಕೃತ್ಯದ ಸ್ಥಳ ತೋರಿಸುತ್ತಿದ್ದ ವೇಳೆ, ಮೃತರಾದ ಮುಹಮ್ಮದ್ ಝುನೈದ್ ಮತ್ತು ಮುಹಮ್ಮದ್ ಆಫ್ರಾಜ್ ಅವರ ಸ್ನೇಹಿತರಾದ ಅಬ್ದುಲ್ ರಹಿಮಾನ್ ಹಾಗೂ ಜಾಹೀರ್ ಎಂಬವರು ಏಕಾಏಕಿ ಆರೋಪಿ ಮಹಮ್ಮದ್ ಹಫೀಜ್ ಅಪ್ಪಿ ಮೇಲೆ ಹಲ್ಲೆ ನಡೆಸಲು ಮುಂದಾದರು.

ಕೂಡಲೇ ಎಚ್ಚೆತ್ತ ಪೊಲೀಸರು ಹಾಗೂ ಸ್ಥಳದಲ್ಲಿದ್ದವರು ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!