Saturday, May 18, 2024
Homeಕರಾವಳಿಉಡುಪಿಉಡುಪಿ: ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ; ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ವಾರಂತ್ಯ ಕರ್ಫ್ಯೂ ಜಾರಿ;...

ಉಡುಪಿ: ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ; ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ವಾರಂತ್ಯ ಕರ್ಫ್ಯೂ ಜಾರಿ; ಡಿಸಿ ಕೂರ್ಮ ರಾವ್!

spot_img
- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವೀಕೆಂಡ್‌ ಲಾಕ್‌ಡೌನ್ ಮತ್ತು ನೈಟ್‌ ಕರ್ಪ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ 9:00 ಗಂಟೆಯಿಂದ ಸೋಮವಾರ ಬೆಳಿಗ್ಗೆ 5:00 ಗಂಟೆಯವರೆಗೆ ಕಟ್ಟುನಿಟ್ಟಿನ ವಾರಾಂತ್ಯ ಕರ್ಪ್ಯೂ ಜಾರಿಯಲ್ಲಿರುತ್ತದೆ. ಅಲ್ಲದೇ ಜಿಲ್ಲೆಯಾದ್ಯಂತ ಪ್ರತಿದಿನ ರಾತ್ರಿ 9:00ರಿಂದ ಮರುದಿನ ಬೆಳಗ್ಗೆ 5:00ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದಿನಸಿ ಅಂಗಡಿಗಳು,ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಗೆ ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಬೆಳಿಗ್ಗೆ 5:00ರಿಂದ ಅಪರಾಹ್ನ 2:00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.

ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಬೆಳಿಗ್ಗೆ 5:00ರಿಂದ ಅಪರಾಹ್ನ 2:00ರವರೆಗೆ ಪಾರ್ಸೆಲ್ ಕೊಂಡುಹೋಗಲು ಮಾತ್ರ ಅನುಮತಿ ನೀಡಲಾಗಿದೆ. ಜನರು ಮನೆಯಿಂದ ಹೊರಕ್ಕೆ ಸಂಚರಿಸುವುದನ್ನು ಕಡಿಮೆ ಮಾಡಲು ಕೋವಿಡ್-19 ನಿರ್ವಹಣೆಗಾಗಿರುವ ರಾಷ್ಟ್ರೀಯ ನಿರ್ದೇಶನಗಳಿಗೆ ಬದ್ಧರಾಗಿ ದಿನದ 24 ಗಂಟೆ ಹೋಮ್ ಡೆಲಿವರಿ ಸೇವೆಗಳನ್ನು ನೀಡಲು ಪ್ರೊತ್ಸಾಹಿಸಲಾಗುವುದು.

ಡೈರಿ ಮತ್ತು ಹಾಲಿನ ಬೂತ್‌ಗಳು ಬೆಳಗ್ಗೆ 5:00ರಿಂದ ರಾತ್ರಿ 8:00 ಗಂಟೆಯವರೆಗೆ ಕಾರ್ಯಚರಿಸಲು ಅನುಮತಿ ಇದೆ.

ರೆಸ್ಟೋರೆಂಟ್‌ಗಳಲ್ಲಿ ಆಹಾರಗಳನ್ನು ತೆಗೆದು ಕೊಂಡು ಹೋಗಲು ಮತ್ತು ಹೋಮ್ ಡೆಲಿವರಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಪಬ್‌ಗಳಿಗೆ ಅನುಮತಿ ಇರುವುದಿಲ್ಲ.ಬಸ್, ರೈಲುಗಳು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ಇದ್ದು, ನಿಲ್ದಾಣಗಳಿಂದ ಹೊರಡುವ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ. ಪ್ರಯಾಣ ಮಾಡುವ ಸಂಧರ್ಭದಲ್ಲಿ ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆಗಳು / ಟಿಕೆಟುಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಕೋವಿಡ್-19 ಸೂಕ್ತ ಶಿಷ್ಟಾಚಾರವನ್ನು ಅನುಸರಿಸುವ ಷರತ್ತುಗಳೊಂದಿಗೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳನ್ನು/ ಸ್ಟೇಡಿಯಂ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ.ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಇತರೆ ಸಭೆಗಳು ಹಾಗೂ ಸಮಾರಂಭಗಳು ಮತ್ತು ಸಾರ್ವಜನಿಕರು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ.

ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತುಗಳೊಂದಿಗೆ ಮದುವೆ/ ಕೌಟುಂಬಿಕ ಶುಭ ಸಮಾರಂಭಗಳಿಗೆ ಸರ್ಕಾರದ ಹಿಂದಿನ ಮಾರ್ಗಸೂಚಿಯಂತೆ ನಿಗದಿಪಡಿಸಿದ ಷರತ್ತಿಗೊಳಪಟ್ಟು ಸಭಾಂಗಣದ ಸಾಮರ್ಥ್ಯದ ಶೇ.50ರಷ್ಠು ಮತ್ತು ಗರಿಷ್ಠ 400 ಜನರಿಗೆ ಮೀರದಂತೆ ನಡೆಸಲು ಅನುಮತಿ ನೀಡಲಾಗಿದೆ.ಮದುವೆ/ ಕೌಟುಂಬಿಕ ಶುಭ ಸಮಾರಂಭಗಳನ್ನು ಆಯೋಜಿಸುವವರು ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್‌ಗೆ ಸಲ್ಲಿಸಬೇಕು.

ಅರ್ಜಿಯ ಸ್ವೀಕೃತಿಯ ಮೇರೆಗೆ, ತಹಶೀಲ್ದಾರರು ಪ್ರತಿ ಮದುವೆ/ ಕೌಟುಂಬಿಕ ಶುಭ ಸಮಾರಂಭಕ್ಕೆ 400 ಪಾಸ್‌ಗಳನ್ನು ವಿತರಿಸುವರು. ಪಾಸ್ ಹೊಂದಿರುವ ಜನರಿಗೆ ಮಾತ್ರ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗಲು ಅವಕಾಶವಿರುತ್ತದೆ. ಕೋವಿಡ್-19 ಸೂಕ್ತ ನಡವಳಿಕೆಯಂತೆ ಅಂತ್ಯ ಸಂಸ್ಕಾರಕ್ಕೆ 20 ಜನಕ್ಕೆ ಮೀರದಂತೆ ನಡೆಸಲು ಅನುಮತಿ ನೀಡಲಾಗಿದೆ.

ಪೂಜಾ ಸ್ಥಳಗಳಾದ ದೇವಾಲಯಗಳು, ಮಸೀದಿಗಳು, ಚರ್ಚುಗಳು, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವುದರೊಂದಿಗೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಹೊರಡಿಸಲಾದ ಎಸ್‌ಒಪಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಗೊಳಪಟ್ಟು ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಅನುಮತಿ ಇದೆ. ಆದರೆ ಧಾರ್ಮಿಕ ಸ್ಥಳಗಳಲ್ಲಿ ಜಾತ್ರೆಗಳು, ದೇವಾಲಯ ಉತ್ಸವಗಳು/ಹಬ್ಬಗಳು, ಮೆರವಣಿಗೆಗಳು ಮತ್ತು ಜನ ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ.

ಕೋವಿಡ್-19 ಸೂಕ್ತ ನಡವಳಿಕೆಯಂತೆ ಶೇ.100ರಷ್ಟು ಆಸನ ಸಾಮರ್ಥ್ಯದವರೆಗೆ ಸಾರ್ವಜನಿಕ ಸಾರಿಗೆಗಳಿಗೆ ಅನುಮತಿ ನೀಡಲಾಗಿದೆ. ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಖಾಸಗಿ ಕಚೇರಿಗಳು ಮತ್ತು ಮುಚ್ಚಿದ ಸ್ಥಳಗಳಲ್ಲಿ ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ಕ್ರಮ ಕೈಕೊಳ್ಳಲಾಗುವುದು.

ವಿದ್ಯಾಭ್ಯಾಸದ ಸಲುವಾಗಿ ಕೇರಳ ರಾಜ್ಯದಿಂದ ಉಡುಪಿ ಜಿಲ್ಲೆಗೆ ಆಗಮಿಸುವ ನರ್ಸಿಂಗ್, ಮೆಡಿಕಲ್, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಒಳಗೊಂಡಂತೆ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರವೇಶಿಸುವ ಪೂರ್ವದಲ್ಲಿ 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್-19 ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದು ಮತ್ತು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಒಳಪಡುವುದು ಹಾಗೂ ಕೊನೆಯ ದಿನ ಮತ್ತೆ ಆರ್‌ಟಿಪಿಸಿಎರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ಉಡುಪಿ ಜಿಲೆಯಲ್ಲಿ ಉದ್ಯೋಗ ಹೊಂದಿದ್ದು, ಕೇರಳ ರಾಜ್ಯದಿಂದ ಉಡುಪಿ ಜಿಲ್ಲೆಗೆ ಆಗಮಿಸುವ ಅಥವಾ ಉಡುಪಿಗೆ ಪ್ರವೇಶಿಸುವ ಹಿಂದಿನ 7 ದಿನಗಳಲ್ಲಿ ಕೇರಳ ರಾಜ್ಯಕ್ಕೆ ಭೇಟಿ ನೀಡಿದ ಎಲ್ಲಾ ಉದ್ಯೋಗಿಗಳಿಗೆ ಮೇಲಿನ ಮಾರ್ಗಸೂಚಿಗಳು ಅನ್ವಯವಾಗುತ್ತದೆ. ಇವುಗಳನ್ನು ಜಾರಿಗೊಳಿಸುವುದು ಆಯಾ ಆಡಳಿತ ಮಂಡಳಿಗಳು/ ಉದ್ಯೋಗದಾತರ ಜವಾಬ್ದಾರಿಯಾಗಿದೆ.

ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಲು ಮುಖಗವಸುಗಳನ್ನು ಧರಿಸುವುದು, ಕೈಗಳ ನೈರ್ಮಲ್ಯ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮಾಸ್ಕ್ ಧರಿಸುವುದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಅತ್ಯವಶ್ಯಕ ಕ್ರಮವಾಗಿದ್ದು, ಮುಖಗವಸುಗಳನ್ನು ಧರಿಸದ ವ್ಯಕ್ತಿಗಳ ವಿರುದ್ಧ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ರೂ. 250 ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100 ದಂಡ ವಿಧಿಸಲಾಗುವುದು.

ಇನ್ನು ವೀಕೆಂಡ್‌ ಲಾಕ್‌ಡೌನ್, ನೈಟ್‌ ಕರ್ಪ್ಯೂ ಆದೇಶವನ್ನು ಪಾಲಿಸದೇ ಇದ್ದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಗೆ ನೀಡಿದ್ದಾರೆ.

- Advertisement -
spot_img

Latest News

error: Content is protected !!