ಮಂಗಳೂರು : ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕಿಕೊಂಡಿದ್ದ ಇಬ್ಬರನ್ನು ಮೇ.29 ರಂದು ರಾತ್ರಿ ಬಂಧಿಸಿದ್ದು ಮೂವರು ಆರೋಪಿಗಳು ಪರಾರಿಯಾಗಿದ್ದು ಇನೋವಾ ವಾಹನದಲ್ಲಿ ದರೋಡೆಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಡಬಿದ್ರೆ ತಾಲೂಕಿನ ಮಾರ್ಪಾಡಿ ಗ್ರಾಮದ ಸುಭಾಶ್ ನಗರ ನಿವಾಸಿ ಈರಣ್ಣ ಮಗ ಜಗದೀಶ್(29) ಮತ್ತು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಅಂಗರ ಕರಿಯ ನಿವಾಸಿ ವಾಸು ಶೆಟ್ಟಿ ಮಗ ಪ್ರಶಾಂತ್@ ಪಾಂತು(27) ಬಂಧಿತ ಆರೋಪಿಗಳು. ಬಂಧಿತರಿಂದ ತಲವಾರ್,ಖಾರದ ಪುಡಿ ಪ್ಯಾಕೆಟ್, KA-35-M-9299 ನಂಬರಿನ ಇನೋವಾ ಕಾರು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕಲಂ 310(4),310(5) ಜೊತೆಗೆ 190 BNS ಮತ್ತು 3,25(1-B)(a) ಅರ್ಮ್ಸ್ ಆಕ್ಟ್ (399,402 ಜೊತೆಗೆ 149 IPC) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಶ್ರೀಮತಿ ಪ್ರತಿಭಾ ಪೊಲೀಸ್ ಉಪ ನಿರೀಕ್ಷಕ ರವರು ಮೇ.29 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನ ಸಂಖ್ಯೆ ಕೆಎ-19-ಜಿ-553 ನೇದರಲ್ಲಿ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಠಾಣಾ ಸರಹದ್ದಿನ ಪುತ್ತಿಗೆ ಗ್ರಾಮದ ವಿದ್ಯಾಗಿರಿ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ ಸುಮಾರು 10:15 ಗಂಟೆಗೆ ಬಡಗ ಮಿಜಾರ್ ಗ್ರಾಮದ ಬೊಳ್ಳಿಚಾರ್ ಎಂಬಲ್ಲಿ 5 ಜನರು ಒಂದು ಕಾರಿನಲ್ಲಿ ಬಂದು ಗುಂಪು ಸೇರಿ ಯಾವುದೋ ದರೋಡೆ ಕೃತ್ಯವನ್ನು ನಡೆಸಲು ಹೊಂಚು ಹಾಕಿ ನಿಂತು ಕೊಂಡಿರುತ್ತಾರೆ ಎಂಬುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಕೂಡಲೆ ಮಾಹಿತಿ ಬಂದ ಸ್ಥಳಕ್ಕೆ ಹೊರಟು ಹೋಗಿ ಸ್ವಲ್ಪ ದೂರದಲ್ಲಿ ಇಲಾಖಾ ವಾಹನವನ್ನು ಮರೆಯಾಗಿ ನಿಲ್ಲಿಸಿ ನೋಡಲಾಗಿ ಕೆಎ-35-ಎಮ್-9299 ನಂಬರಿನ ಒಂದು ಇನ್ನೋವಾ ಕಾರಿನ ಬಳಿ 5 ಜನರು ಗುಂಪು ಸೇರಿ ನಿಂತಿರುವುದನ್ನು ಕಂಡು ಕೂಡಲೇ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅವರುಗಳನ್ನು ಸುತ್ತುವರೆದು ರಾತ್ರಿ 10:30 ಗಂಟೆಗೆ ದಾಳಿ ನಡೆಸಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅವರುಗಳ ಪೈಕಿ 3 ಜನ ಓಡಿಕೊಂಡು ಪರಾರಿಯಾಗಿದ್ದು, ಜಗದೀಶ ಮತ್ತು ಪ್ರಶಾಂತ್ @ ಪಾಂತು ಎಂಬುವರನ್ನು ವಶಕ್ಕೆ ಪಡೆದುಕೊಂಡ ವ್ಯಕ್ತಿಗಳಲ್ಲಿ ಓಡಲು ಪ್ರಯತ್ನಿಸಿದ ಬಗ್ಗೆ ವಿಚಾರಿಸಿದಾಗ ಇನ್ನೋವಾ ಕಾರಿನಲ್ಲಿ ಇಲ್ಲಿಗೆ ಬಂದು ಕಾರಿನಲ್ಲಿ ಕಬ್ಬಿಣದ ತಲವಾರ್, ಖಾರದ ಪುಡಿ ಪ್ಯಾಕೇಟನ್ನು ಇರಿಸಿಕೊಂಡು ದಾರಿಯಲ್ಲಿ ಹಾದು ಹೋಗುವ ಜನರನ್ನು ದರೋಡೆ ಮಾಡುವ ಉದ್ದೇಶದಿಂದ ಹಾಗೂ ರಾತ್ರಿ ಸಮಯ ದ್ವಿ-ಚಕ್ರ ವಾಹನದಲ್ಲಿ ಓಡಾಡುವ ಜನರನ್ನು ನಿಲ್ಲಿಸಿ ಅವರಿಗೆ ಕಬ್ಬಿಣದ ತಲವಾರ್ ನ್ನು ತೋರಿಸಿ ಹೆದರಿಸಿ, ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಅವರಲ್ಲಿರುವ ಹಣ ಹಾಗೂ ಸೊತ್ತುಗಳನ್ನು ಬಲವಂತವಾಗಿ ದೋಚುವ ಉದ್ದೇಶದಿಂದ ಇಲ್ಲಿಗೆ ಬಂದು ಸೇರಿ ಈ ಬಗ್ಗೆ ಸಮಾಲೋಚನೆ ಮಾಡುತ್ತಿದ್ದೆವು’ ಎಂಬುವುದಾಗಿ ತಿಳಿಸಿದ್ದು, ಅವರು ಬಂದಿರುವ ಕಾರನ್ನು ಪರಿಶೀಲಿಸಲಾಗಿ ಕಾರಿನ ಡಿಕ್ಕಿಯಲ್ಲಿ ಕಬ್ಬಿಣದ ತಲವಾರ್ ಹಾಗೂ ಖಾರದ ಪುಡಿ ಪ್ಯಾಕೇಟ್ ಇರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


