ಮಂಗಳೂರಿನ ಆಟೋ ಚಾಲಕ ಮೊಹಮ್ಮದ್ ಶರೀಫ್ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮರಣೋತ್ತರ ಪರೀಕ್ಷೆಯಲ್ಲಿ ಶರೀಫ್ ಸಾವಿಗೆ ಕಾರಣ ಬಹಿರಂಗವಾಗಿದೆ.
ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಲೆ ಕೃತ್ಯವಾಗಿದೆಯೆಂದು ದೃಢೀಕರಿಸಲಾಗಿದೆ. ಕುತ್ತಿಗೆ ಹಾಗೂ ತಲೆಯ ಹಿಂಭಾಗದಲ್ಲಿ ಉಂಟಾದ ಇರಿತದ ಗಾಯವೇ ಸಾವಿಗೆ ಕಾರಣವೆಂದು ತಿಳಿದು ಬಂದಿದೆ.
ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆಯಲ್ಲಿ ಆವರಣ ಗೋಡೆಯಿಲ್ಲದ ಬಾವಿಯಲ್ಲಿ ಮಂಗಳೂರಿನ ಮೂಲ್ಕಿ ಕೊಲಾಡು ನಿವಾಸಿ, ಮಂಗಳೂರಿನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದ ಮೊಹಮ್ಮದ್ ಶರೀಫ್ (52) ಅವರ ಮೃತ ದೇಹ ಪತ್ತೆಯಾಗಿತ್ತು. ಬಾವಿಯ ಬಳಿ ರಕ್ತ ಮಿಶ್ರಿತ ಬಟ್ಟೆಗಳು, ಪಾದರಕ್ಷೆ, ಪರ್ಸ್ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರ್ಸ್ ತೆರೆದು ನೋಡಿದಾಗ ಮೃತಪಟ್ಟ ವ್ಯಕ್ತಿಯ ಭಾವಚಿತ್ರ ಹಾಗೂ ದಾಖಲೆ ಪತ್ರಗಳು ಕಂಡು ಬಂದಿದ್ದವು. ಈ ಬಗ್ಗೆ ಮಂಜೇಶ್ವರ ಪೊಲೀಸರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.