Monday, May 20, 2024
Homeತಾಜಾ ಸುದ್ದಿಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಸುದೀಪ್ ಮಾತಿಗೆ ಟ್ವೀಟ್ ಮೂಲಕ ಕಾಲೆಳೆದ ಅಜಯ ದೇವಗನ್: ಅಜಯ್ ಗೆ...

ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಸುದೀಪ್ ಮಾತಿಗೆ ಟ್ವೀಟ್ ಮೂಲಕ ಕಾಲೆಳೆದ ಅಜಯ ದೇವಗನ್: ಅಜಯ್ ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಕಿಚ್ಚ

spot_img
- Advertisement -
- Advertisement -

ಬೆಂಗಳೂರು: ನಟ ಕಿಚ್ಚ ಸುದೀಪ್​ ಕೆಲವು ದಿನಗಳ ಹಿಂದೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ನೀಡಿರುವ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್​ ಪ್ರತಿಕ್ರಿಯಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.  

ಸುದೀಪ್ ಹೇಳಿಕೆಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಅಜಯ್​ ದೇವಗನ್​, ‘ನನ್ನ ಸಹೋದರ.. ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದ್ದು, ಇಂದೂ ಮತ್ತು ಎಂದೆಂದಿಗೂ ಇರುತ್ತದೆ..’ ಎಂದು ಅಜಯ್ ದೇವಗನ್ ಹೇಳಿದ್ದಾರೆ.

ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸ್ಪಷ್ಟನೆಯನ್ನು ನೀಡಿದ್ದಾರೆ. ‘ನಾನು ಯಾವ ವಿಷಯವಾಗಿ ಹಾಗೆ ಹೇಳಿದ್ದೆ ಎಂಬುದು ಬಹುಶಃ ನಿಮ್ಮನ್ನು ಬೇರೆಯದೇ ರೀತಿಯಲ್ಲಿ ತಲುಪಿರಬಹುದು. ನಿಮ್ಮನ್ನು ಮುಖತಃ ಭೇಟಿಯಾದಾಗ ನಾನು ಯಾಕೆ ಹಾಗೆ ಹೇಳಿದ್ದೆ ಎಂಬುದನ್ನು ವಿವರಿಸುವೆ. ಅದು ನೋವು ಅಥವಾ ಯಾವುದೇ ವಿವಾದ ಆಗಿಸುವ ಉದ್ದೇಶದಿಂದ ಹೇಳಿದ್ದಲ್ಲ’ ಎಂಬುದಾಗಿ ಸುದೀಪ್ ಹೇಳಿದ್ದಾರೆ.

‘ನೀವು ಹಿಂದಿಯಲ್ಲಿ ಕಳಿಸಿದ ಸಂದೇಶ ನನಗೆ ಅರ್ಥವಾಗಿದೆ. ನಾವು ಹಿಂದಿಯನ್ನು ಪ್ರೀತಿಸಿದ, ಗೌರವಿಸಿದ ಹಾಗೂ ಅದನ್ನು ಕಲಿತ ಕಾರಣಕ್ಕೆ ಅದು ಸಾಧ್ಯವಾಗಿದೆ. ಅಪರಾಧವೇನಲ್ಲ… ಆದರೆ ಅದಕ್ಕೆ ನಾನು ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದಿದ್ದರೆ ಹೇಗಿರುತ್ತಿತ್ತು ಅಂತ ಆಶ್ಚರ್ಯವಾಗುತ್ತಿದೆ. ನಾವೂ ಭಾರತಕ್ಕೆ ಸೇರಿದವರೇ ಅಲ್ವೇ?’ ಎಂದೂ ಸುದೀಪ್ ಪ್ರಶ್ನಿಸಿದ್ದಾರೆ.

‘ನಾನು ನಮ್ಮ ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯ ಇಲ್ಲಿಗೇ ನಿಲ್ಲುತ್ತದೆ ಅಂತ ಅಂದುಕೊಳ್ಳುತ್ತೇನೆ. ಮೊದಲೇ ಹೇಳಿದಂತೆ ನಾನು ಹೇಳಿದ್ದ ವಿಷಯವೇ ಬೇರೆ. ತುಂಬಾ ಪ್ರೀತಿ ಮತ್ತು ಹಾರೈಕೆಗಳೊಂದಿಗೆ.. ನಿಮ್ಮನ್ನು ಸದ್ಯದಲ್ಲೇ ಕಾಣುವ ಭರವಸೆಯೊಂದಿಗೆ..’ ಎನ್ನುತ್ತಾ ಟ್ವೀಟ್ ವಾರ್ ಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಅದಕ್ಕೆ ಕೊನೆಗೆ ಇಂಗ್ಲಿಷ್​ನಲ್ಲಿ ಪ್ರತಿಕ್ರಿಯಿಸಿರುವ ಅಜಯ್ ದೇವಗನ್​, ‘ನೀವು ಸ್ನೇಹಿತ, ಅಪಾರ್ಥವನ್ನು ಮನದಟ್ಟು ಮಾಡಿಸಿದ್ದಕ್ಕೆ ಧನ್ಯವಾದಗಳು. ಇಡೀ ಸಿನಿಮಾ ಇಂಡಸ್ಟ್ರಿಯೇ ಒಂದು ಎಂದು ಭಾವಿಸಿದವನು ನಾನು. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ ಹಾಗೂ ಎಲ್ಲರೂ ನಮ್ಮ ಭಾಷೆಯನ್ನು ಗೌರವಿಸಲಿ ಎಂದು ಬಯಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆದಂತಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ.

‘ಅನುವಾದ ಹಾಗೂ ವ್ಯಾಖ್ಯಾನಗಳು ದೃಷ್ಟಿಕೋನದಲ್ಲಿ ಇರುತ್ವೆ ಸರ್.. ಅದೇ ಕಾರಣಕ್ಕೆ ವಿಷಯದ ಕುರಿತು ಸರಿಯಾಗಿ ತಿಳಿಯದಿರುವಾಗ ಪ್ರತಿಕ್ರಿಯಿಸದಿರುವುದೇ ಮುಖ್ಯವಾಗುತ್ತದೆ. ನಾನು ನಿಮ್ಮನ್ನು ದೂರುತ್ತಿಲ್ಲ. ಬಹುಶಃ ಒಂದು ರಚನಾತ್ಮಕ ಕಾರಣಕ್ಕೆ ನಿಮ್ಮಿಂದ ಟ್ವೀಟ್ ಬಂದಿದ್ದರೆ ತುಂಬಾ ಖುಷಿಯಾಗಿರುತ್ತಿತ್ತು’ ಎನ್ನುವ ಮೂಲಕ ಸುದೀಪ್ ಈ ವಿಷಯಕ್ಕೆ ಬಹುತೇಕ ತೆರೆ ಎಳೆದಿದ್ದಾರೆ.

- Advertisement -
spot_img

Latest News

error: Content is protected !!