ಉತ್ತರಕನ್ನಡ: ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಪರಿಸರ ಪ್ರೇಮಿ ತುಳಸಿಗೌಡ ಅಸ್ತಂಗತರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ..
ಹಾಲಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ತುಳಸಿ ಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರು . 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ಅವರ ಪರಿಶ್ರಮಕ್ಕೆ ಭಾರತ ಸರ್ಕಾರವು 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದವರು ತುಳಸಿ ಗೌಡ. ಬಾಲ್ಯವಿವಾಹವಾದ ತುಳಸಿ ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ವಿಧವೆಯಾದರು. ಪರಿಸರ ಪ್ರೇಮ ಎನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಕೊನೆ ಉಸಿರು ಇರೋವರೆಗೂ ಪರಿಸರದೊಂದಿಗೆ ಜೀವಿಸಿದ್ದಾರೆ ತುಳಸಿ ಗೌಡ. ನಿನ್ನೆ ತುಳಸಿಗೌಡ ನಿಧನರಾಗಿದ್ದರು. ಅವರ ಸಾವಿಗೆ ರಾಜ್ಯದ ಜನ ಕಂಬನಿ ಮಿಡಿದಿದ್ದಾರೆ. ಮೃತರು ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.