ಬೆಂಗಳೂರು: ಖ್ಯಾತ ನಟ ಯಶ್ ಇದೀಗ ಟಾಕ್ಸಿಕ್ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ, ಟಾಕ್ಸಿಕ್ ಚಿತ್ರತಂಡಕ್ಕೆ ಸಮಸ್ಯೆಯೊಂದು ಎದುರಾಗಿದ್ದು, ಈ ಚಿತ್ರದ ಸೆಟ್ ಗಾಗಿ ಸಾವಿರಾರೂ ಮರಗಳನ್ನು ಕಡಿದಿರುವುದು ಸ್ಯಾಟಲೈಟ್ ಫೋಟೋಗಳಿಂದ ಬಹಿರಂಗಗೊಂಡಿವೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ‘HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ,’ ಎಂದಿದ್ದಾರೆ.
ವಕೀಲ ಜಿ. ಬಾಲಾಜಿ ನಾಯ್ಡು ಎಂಬುವರು ಕರ್ನಾಟಕ ಹೈಕೋರ್ಟ್ ನಲ್ಲಿ, ‘ಈ ಹಿಂದೆ ಟಾಕ್ಸಿಕ್ ಚಿತ್ರಕ್ಕಾಗಿ ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ,’ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಈ ಸಂಬಂಧ ಹೈಕೋರ್ಟ್ ಟಾಕ್ಸಿಕ್ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮ್ತತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ನೀಡಿತ್ತು.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಯಶ್ ಗೆ ಜೋಡಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ. ಈ ಚಿತ್ರವನ್ನು ಮಲಯಾಳಿ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.