Wednesday, April 24, 2024
Homeಕರಾವಳಿಉಡುಪಿಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದ ಮಂಗಳಮುಖಿಯರು

ಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದ ಮಂಗಳಮುಖಿಯರು

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಮಂಗಳ ಮುಖಿಯರಿದ್ದು, ಇವರ ಪೈಕಿ ಮುನ್ನೂರರಷ್ಟು ಜನ ಮುಖ್ಯವಾಹಿನಿಯಲ್ಲಿದ್ದಾರೆ. ತಮ್ಮದೇ ‘ಆಶ್ರಯ ಸಮುದಾಯ ಸಂಘಟನೆ’ ಕಟ್ಟಿಕೊಂಡಿರುವ ಇವರು ಸಮಾಜಕ್ಕೆ ತಾವೇನಾದರೂ ಮಾಡಬೇಕು ಎಂಬ ಕಳಕಳಿ ಇಟ್ಟುಕೊಂಡಿದ್ದಾರೆ. ಆಶ್ರಯ ಸಮುದಾಯ ಸಂಘಟನೆಯ ಸದಸ್ಯರಾದ ಸಮೀಕ್ಷಾ, ಸಾನ್ವಿ, ರೇಖಾ ,ಸಂಧ್ಯಾ ,ನಿಶಾ, ಲಾವಣ್ಯ ಎಂಬವರ ತಂಡ ಉಡುಪಿ ಜಿಲ್ಲೆಯಾದ್ಯಂತ ಭಿಕ್ಷಾಟನೆ ಮಾಡಿ ಎರಡೂವರೆ ವರ್ಷದ ಮಗುವಿನ ಕಾಯಿಲೆಗೆ ಹಣ ನೀಡುವ ಮೂಲಕ ಮಿಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ನಿವಾಸಿ ಆರಾಧ್ಯ ಎಂಬ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಸಂಪೂರ್ಣ ಶ್ರವಣದೋಷ ಇತ್ತು. ಜೊತೆಗೆ ಮಗುವಿಗೆ ಮಾತನಾಡಲಾಗುತ್ತಿರಲಿಲ್ಲ. ಮಗುವಿನ ಕಿವಿಯ ಸರ್ಜರಿಗೆ ಬರೋಬ್ಬರಿ 14 ಲಕ್ಷ ರೂಪಾಯಿಗಳ ಅಗತ್ಯ ಇತ್ತು. ಮಾತ್ರವಲ್ಲ, ಮೂರು ತಿಂಗಳ ಒಳಗಾಗಿ ಈ ಸರ್ಜರಿ ಮಾಡಲೇಬೇಕಿತ್ತು. ಆಗ ಈ ಮಗುವಿನ ನೆರವಿಗೆ ಬಂದಿದ್ದು ಮಂಗಳಮುಖಿಯರ ಒಂದು ಗುಂಪು.

ಸಾಮಾಜಿಕ ಜಾಲತಾಣದ ಮೂಲಕ ಮಗುವಿನ ಕಷ್ಟವನ್ನು ಅರಿತ ಸಮೀಕ್ಷಾ, ತಮ್ಮ ತಂಡ ಕಟ್ಟಿಕೊಂಡು ಮಗುವಿನ‌ ಸರ್ಜರಿಗಾಗಿ ಹಣ ಸಂಗ್ರಹ ಮಾಡಿದ್ದಾರೆ. ಖುದ್ದು ಎಂಬಿಎ ಪದವೀಧರೆಯಾಗಿರುವ ಸಮೀಕ್ಷಾ ನೇತೃತ್ವದಲ್ಲಿ ಉಡುಪಿ, ಕಾರ್ಕಳ, ಮಣಿಪಾಲ ಮುಂತಾದೆಡೆ ಸಂಚರಿಸಿ ಸುಮಾರು 21 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಅದನ್ನು ಮಗುವಿಗೆ ತಲುಪಿಸಿದ್ದಾರೆ. ಈ ಮೂಲಕ ಮಂಗಳಮುಖಿಯರು ಮಾನವೀಯತೆ ಮೆರೆದಿದ್ದಾರೆ. ಈ ಹಣ ಸಣ್ಣ ಮೊತ್ತದ್ದೇ ಆಗಿದ್ದರೂ ಮಗುವಿಗಾಗಿ ಮಿಡಿದ ಮಂಗಳಮುಖಿಯರ ಮಾನವೀಯತೆ ಬೆಲೆ ಕಟ್ಟಲಾಗದ್ದು.

ಲಾಕ್ ಡೌನ್ ಸಂದರ್ಭದಲ್ಲಿ ಸಮೀಕ್ಷಾ ಎಂಬಾಕೆಯ ತಂಡ ಉಡುಪಿಯ ಬಸ್ ನಿಲ್ದಾಣದಲ್ಲಿದ್ದ ನಿರ್ಗತಿಕರು, ಅಶಕ್ತರು ಮತ್ತು ಮನೆಯಿಲ್ಲದವರಿಗೆ ಊಟ ನೀಡಿದೆ. ಸಮೀಕ್ಷಾ ಎಂಬಾಕೆ ತನ್ನ ಸ್ವಂತ ದುಡ್ಡಿನಲ್ಲಿ ಹತ್ತು ಮನೆಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. ಎರಡೂವರೆ ವರ್ಷದ ಹೆಣ್ಣು ಮಗುವಿನ ಆಪರೇಷನ್ ಗಾಗಿ ಯಾವುದೇ ಪ್ರಚಾರ ಬಯಸದೆ ಹಣ ಸಂಗ್ರಹ ಮಾಡಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿರುವ ಜನರಿಗೂ ಮಾದರಿಯಾಗಿದ್ದಾರೆ.

- Advertisement -
spot_img

Latest News

error: Content is protected !!