ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದ ಮೂವರು ಮಕ್ಕಳು ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಇದೀಗ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾಗಿರುವವರು ಶರತ್ (16), ಧನಂಜಯ್ (16), ಮುರುಳಿ (16) ಎಂದು ಗುರುತಿಸಲಾಗಿದ್ದು, ಇವರು ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಕಿರುಹುಣಸೆ ಗ್ರಾಮದ ಮಹೇಂದ್ರ ಎಂಬುವವರ ಮಕ್ಕಳಾಗಿದ್ದಾರೆ.
ಈ ಮೂವರು ವಿದ್ಯಾರ್ಥಿಗಳು ಕುನಿಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆದರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇವರು ಬುಧವಾರ ಬೆಳಿಗ್ಗೆ 7:30ಕ್ಕೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದಾರೆ. ಆದರೆ ಶಾಲೆಗೆ ಮೂವರು ಕೂಡ ಬರದಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪೋಷಕರು ತಮ್ಮ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದು, ರಾತ್ರಿಯಾದರೂ ಮೂವರು ಮಕ್ಕಳು ಮನೆಗೆ ವಾಪಸ್ ಬರದೇ ಇರುವುದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ತಮ್ಮ ಮಕ್ಕಳನ್ನು ಹುಡುಕಿಸಿ ಕೊಡುವಂತೆ ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಪತ್ತೆಯಾಗಿರುವ ಓರ್ವ ವಿದ್ಯಾರ್ಥಿ ಶರತ್ ಬಳಿ ಮೊಬೈಲ್ ಫೋನ್ ಇದ್ದು, ಆ ಪೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.