Friday, October 2, 2026
Homeಕರಾವಳಿಸಾಮರಸ್ಯದ ಸಂಕೇತವೇ ಈ ಭಜನೆ: ಪ್ರೊ. ಪವನ್ ಕಿರಣಕೆರೆ

ಸಾಮರಸ್ಯದ ಸಂಕೇತವೇ ಈ ಭಜನೆ: ಪ್ರೊ. ಪವನ್ ಕಿರಣಕೆರೆ

- Advertisement -
- Advertisement -

ಬೆಳ್ತಂಗಡಿ: ಯಾವುದೇ ಮತ ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗವೇ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯವನ್ನು ಸಾರುವ ಕಾರ್ಯವನ್ನು ಈ ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.2 ಶುಕ್ರವಾರದಂದು ನಡೆದ 28 ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಮಾತನಾಡಿದರು.

ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದಾಗಿದೆ. ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದು ಎಲ್ಲಾ ಶಿಬಿರಾರ್ಥಿಗಳಿಗೆ ಭೋದಿಸಿದರು.

ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವು ಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹಿಂದಿನ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗಿಯಾಗಿ ಸಾರ್ಥಕತೆಯನ್ನು ಕಂಡ ಹೇಮಂತ್ ಸುಳ್ಯ ತನ್ನ ಅನುಭವದ ಮಾತುಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಉಷಾ ಹೆಬ್ಬಾರ್, ಭಜನಾ ಕಮ್ಮಟ ಸಮಿತಿ ಸಂಚಾಲಕ ಸುಬ್ರಮಣ್ಯ ಪ್ರಸಾದ್, ಸಮಿತಿಯ ಸರ್ವ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗಿಯಾಗಿದ್ದರು.

- Advertisement -

Latest News

error: Content is protected !!