ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು, ರಕ್ಷಣಾ ಪಡೆಗಳಲ್ಲಿ ಅಗ್ನಿವೀರರನ್ನು ಕೆಲಸದಿಂದ ವಜಾಗೊಳಿಸುವ ಸಲುವಾಗಿ ನೇಮಕಾತಿಯಲ್ಲಿ ಜಾತಿ ಪ್ರಮಾಣಪತ್ರ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, “ಕೇಂದ್ರವು ಅಗ್ನಿವೀರರ ಜಾತಿಗಳನ್ನು ವರ್ಗೀಕರಿಸುವ ಸಲುವಾಗಿ ವಿವರ ಕೇಳುತ್ತಿದೆ ಮತ್ತು ಅತಿದೊಡ್ಡ ಜಾತಿವಾದಿ ಸಂಘಟನೆಯಾದ ಆರ್‌ಎಸ್‌ಎಸ್ ಅಗ್ನಿವೀರರನ್ನು ಜಾತಿಯ ಆಧಾರದ ಮೇಲೆ ವಜಾ ಮಾಡುತ್ತಿದೆ” ಎಂದು ಹೇಳಿದ್ದಾರೆ. ಆದರೆ, ಪಾಟ್ನಾದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು “ವದಂತಿ” ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.
“ಜಾತ್ ನಾ ಪುಚೋ ಸಾಧು ಕಿ ಲೇಕಿನ್ ಜಾತ್ ಪುಚೋ ಫೌಜಿ ಕಿ (ಸಂತರ ಜಾತಿಯನ್ನು ಕೇಳಬೇಡಿ. ಆದರೆ, ಶಸ್ತ್ರಸಜ್ಜಿತ ಸಿಬ್ಬಂದಿಯ ಜಾತಿ ಕೇಳಿ)” ಎಂದು ಬಿಜೆಪಿ ಕುರಿತು ತೇಜಸ್ವಿ ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ಜಾತಿವಾರು ಜನಗಣತಿಯಿಂದ ದೂರ ಉಳಿದಿದೆ. ಜನಗಣತಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಹಾರದಲ್ಲೂ, ರಾಜ್ಯ ಸರ್ಕಾರ ತನ್ನ ಸ್ವಂತ ಖರ್ಚಿನಲ್ಲಿ ಜಾತಿವಾರು ಜನಗಣತಿ ನಡೆಸುತ್ತಿದೆ. ಆದರೆ, ಈಗ ಈ ಕೇಂದ್ರ ಸರ್ಕಾರವೇ ಜಾತಿ ಕೇಳುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿರುವ ಅಗ್ನಿವೀರರನ್ನು ಜಾತಿ ಆಧಾರದಲ್ಲಿ ವಜಾಗೊಳಿಸಲು ಆರ್‌ಎಸ್‌ಎಸ್ ಯೋಜನೆ ಹೂಡಿದೆ” ಎಂದು ತೇಜಸ್ವಿ ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರು ಈ ಆರೋಪವನ್ನು ತಳ್ಳಿಹಾಕಿ ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ವಿಷಯ ಬರೀ ವದಂತಿ. ಸ್ವಾತಂತ್ರ್ಯದ ಮೊದಲು ಜಾರಿಯಲ್ಲಿದ್ದ (ನೇಮಕಾತಿ) ವ್ಯವಸ್ಥೆಯನ್ನು ಮುಂದುವರಿಸಲಾಗುತ್ತಿದೆ ಮತ್ತು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳಿದ್ದಾರೆ.