ಉಡುಪಿ: ಅಜೆಕಾರಿನಲ್ಲಿ ಪತ್ನಿಯೇ ಪತಿಯನ್ನು ಕೊಲೆಗೈದ ಪ್ರಕರಣದ ಆರೋಪಿಗಳಾದ ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಗೆಳೆಯ ದಿಲೀಪ್ ಹೆಗ್ಡೆ ಅವರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ಅರುಣ್ ಕೆ. ತಿಳಿಸಿದ್ದಾರೆ.
ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಮೊದಲೇ ಪರಿಚಯಸ್ಥರಾಗಿದ್ದು, ಅನ್ಯೋನ್ಯವಾಗಿದ್ದರು. ಬಾಲಕೃಷ್ಣ ಅವರನ್ನು ಹೇಗಾದರೂ ಕೊಲೆ ಮಾಡಬೇಕೆಂಬ ಸಂಚು ರೂಪಿಸಿದ್ದ ಅವರು ಪ್ರತಿಮಾ ಅವರ ಮೂಲಕ ಪ್ರತೀ ದಿನ ಬಾಲಕೃಷ್ಣ ಅವರ ಊಟದಲ್ಲಿ ವಿಷಪದಾರ್ಥ ಮಿಶ್ರಣ ಮಾಡಿ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸ್ವಸ್ಥರಾಗಿದ್ದ ಬಾಲಕೃಷ್ಣ ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳಿಬ್ಬರೂ ಸೇರಿ ಅ.19ರಂದು ಅಸ್ವಸ್ಥರಾಗಿದ್ದ ಬಾಲಕೃಷ್ಣ ಅವರ ಮುಖಕ್ಕೆ ಬಟ್ಟೆ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಪ್ರತಿಮಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ದಿಲೀಪ್ ಹೆಗ್ಡೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


