ಮಂಗಳೂರು: ಈ ವರ್ಷದಿಂದ ಕಂಬಳದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ಎಂಬ ಆರು ವಿಭಾಗಗಳಲ್ಲಿ ನಡೆಯುವ ಕಂಬಳ ಸ್ಪರ್ಧೆಗಳಿಗೆ ಸಮಯ ನಿರ್ವಹಣೆ ಮತ್ತು ಅಂಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಈ ಬಾರಿ 6.5 ಕೋಲು ಮತ್ತು 7.5 ಕೋಲು ನಿಶಾನೆಗೆ ನೀರು ತಾಕಿದರಷ್ಟೇ ಬಹುಮಾನ ನೀಡುವಂತೆ ಕಂಬಳ ಸಮಿತಿ ನಿರ್ಧರಿಸಿದೆ.
ಕನೆ ಹಲಗೆ ವಿಭಾಗಕ್ಕೆ 3.30 ಗಂಟೆಯಲ್ಲಿ 5 ಸುತ್ತು ಕಡ್ಡಾಯ: ಕನೆ ಹಲಗೆ ವಿಭಾಗದಲ್ಲಿ 4 ಸುತ್ತಿನ ಓಟಕ್ಕೆ ಅವಕಾಶವಿತ್ತು. ಆದರೆ ಈ ವರ್ಷದಿಂದ 3 ಗಂಟೆ 30 ನಿಮಿಷದೊಳಗೆ 5 ಸುತ್ತು ಓಟ ಮುಗಿಸುವುದು ಕಡ್ಡಾಯವಾಗಲಿದೆ. ನಿಗದಿತ ಸಮಯದೊಳಗೆ 5 ಸುತ್ತುಗಳನ್ನು ಪೂರ್ಣಗೊಳಿಸದಿದ್ದರೆ, ನಂತರ ಮತ್ತಷ್ಟು ಅವಕಾಶ ನೀಡಲಾಗುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಕಂಬಳವನ್ನು ನಿಯಮದಂತೆ 24 ಗಂಟೆಯೊಳಗೆ ಮುಗಿಸಲು ಈ ಕ್ರಮ ಜಾರಿಗೆ ತಂದಿರುವುದಾಗಿ ತಿಳಿಸಲಾಗಿದೆ.
ಕೋಣ ಬಿಡುವ ಸಮಯಕ್ಕೂ ಕಠಿಣ ನಿಯಮ: ಕಂಬಳದ ಇತರ ವಿಭಾಗಗಳಲ್ಲೂ ಕೋಣ ಗಂತಿಗೆ ಇಳಿಸುವ ಮತ್ತು ಬಿಡುವ ಸಮಯಕ್ಕೆ ಕಟ್ಟುನಿಟ್ಟಿನ ಮಿತಿ ನಿಗದಿಪಡಿಸಲಾಗಿದೆ. ಅಡ್ಡ ಹಲಗೆ, ನೇಗಿಲು, ಹಗ್ಗ ಕಿರಿಯ ವಿಭಾಗಗಳಲ್ಲಿ: ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು 3 ನಿಮಿಷ ಕಾಲಾವಕಾಶ. ವಿಳಂಬವಾದರೆ ಅವಕಾಶ ನಿರಾಕರಣೆಯ ಕ್ರಮ ಜಾರಿಯಾಗುತ್ತದೆ. ಹಗ್ಗ ಹಿರಿಯ ಮತ್ತು ಅಡ್ಡ ಹಲಗೆ, ನೇಗಿಲು ವಿಭಾಗಗಳಲ್ಲಿ: ಕೋಣ ಬಿಡಲು 5 ನಿಮಿಷ ಅವಧಿ. ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಗಳಲ್ಲಿ: ಕ್ರಮವಾಗಿ 8 ನಿಮಿಷ ಮತ್ತು 6 ನಿಮಿಷಗಳ ಕಾಲಾವಕಾಶ.
ಈ ಎಲ್ಲಾ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸ್ಪರ್ಧಾಪರರಿಗೆ ನೀಡಲಾಗಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮ ಎಂದು ಕಂಬಳ ಸಮಿತಿ ಸಭೆಯಲ್ಲಿ ಘೋಷಿಸಲಾಗಿದೆ.


