- Advertisement -
- Advertisement -
ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಪುಸ್ತಕ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸದೆ ನಿರ್ಧಾರ ಕೈಗೊಳ್ಳಬೇಕು. ವಿವಾದವನ್ನು ಬೆಳೆಸದೆ ಹೊಸ ಪಠ್ಯ ವಾಪಸು ಪಡೆದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಪರಿಹಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ‘ಪಠ್ಯಪರಿಷ್ಕರಣೆʼ ಹ್ಯಾಷ್‌ಟ್ಯಾಗ್‌ನಡಿ ಸರಣಿ ಟ್ವೀಟ್ ಮಾಡಿದ್ದು, “ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇನ್ನೂ ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡಾ ರದ್ದಿಗೆ ಸೇರಬೇಕಲ್ಲವೇ? “ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ ಚಕ್ರತೀರ್ಥ ಎಂಬ ಬುದ್ಧಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ, ಆ ಸಮಿತಿ ಪರಿಷ್ಕೃರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ ”ಎಂದು ಪ್ರಶ್ನಿಸಿದ್ದಾರೆ.
- Advertisement -