ಸೇಂದಿ ತೆಗೆಯುವುದು ಈಡಿಗ ಜನಾಂಗದ ಮೂಲ ಕುಲಕಸುಬು. ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೇಂದಿ ತೆಗೆಯುವುದು ನಿಷಿದ್ದ. ಕರಾವಳಿಯ ಮಾದರಿಯಲ್ಲೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಸೇಂದಿ ತೆಗೆಯಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಈ ಮೂಲಕ ಕುಲಕಸುಬಿಗೆ ಮತ್ತೆ ಜೀವ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಯೋಗ್ಯರೀತಿಯಲ್ಲಿ ಸಂಸ್ಕರಿಸಿ ಬಳಸಿದರೆ ಸೇಂದಿ ಕೂಡ ಆರೋಗ್ಯಕರ ಪೇಯ ಆಗಬಹುದು. ಶತಮಾನಗಳಿಂದ ಒಂದು ಜನಾಂಗದ ಕುಲಕಸುಬಾಗಿ ಬೆಳೆದುಬಂದಿರುವ ಮೂರ್ತೆಗಾರಿಕೆ, ಈಗ ನಿಷೇಧಿತ ಉದ್ಯಮವಾಗಿದೆ. ಈ ಕುಲಕಸುಬನ್ನೇ ನಂಬಿ ಲಕ್ಷಾಂತರ ಜನ ರಾಜ್ಯದಲ್ಲಿ ಜೀವನೋಪಾಯ ಕಂಡುಕೊಂಡಿದ್ದರು. ಆದರೆ ವೀರೇಂದ್ರ ಪಾಟೀಲರ ಸರಕಾರ ಇದ್ದಾಗ ಸೇಂದಿ ತೆಗೆಯುವುದನ್ನು ನಿಷೇಧಿಸಲಾಯಿತು. ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಬಗ್ಗೆ ಗಂಭೀರ ಸ್ವರೂಪದ ಹೋರಾಟ ನಡೆದು, ಸೇಂದಿ ತೆಗೆಯಲು ಅವಕಾಶವನ್ನು ಕೂಡ ನೀಡಲಾಯಿತು. ಕರಾವಳಿಯ ಮಟ್ಟಿಗೆ ಮೂರ್ತೆದಾರರ ಚಳುವಳಿ ಐತಿಹಾಸಿಕ! ಈಗ ಮತ್ತೆ ಅದೇ ಐತಿಹಾಸಿಕ ಹೋರಾಟಕ್ಕೆ ಚಾಲನೆ ದೊರಕುವ ಲಕ್ಷಣಗಳು ಕಂಡುಬರುತ್ತಿವೆ. ರಾಜ್ಯಾದ್ಯಂತ ಇರುವ ನಿಷೇಧವನ್ನು ತೆರವುಗೊಳಿಸಿ ಎಲ್ಲಾ ಜಿಲ್ಲೆಗಳಲ್ಲೂ ತೆಗೆಯಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಡಿಗ ಸಮುದಾಯದವರು ಬೇರೆಬೇರೆ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸೇಂದಿ ತೆಗೆಯುವುದನ್ನೇ ಪ್ರಮುಖ ಜೀವನೋಪಾಯವಾಗಿ ನಂಬಿದ ಕುಲ ಇದು. ಕರಾವಳಿಯ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ರಾಜಕೀಯ ವಲಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಈಡಿಗ ಸಮುದಾಯದವರು ಇದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಶಿಷ್ಯ ಪರಂಪರೆಯಲ್ಲಿ ಬರುವ ಈ ಸಮುದಾಯ, ಪಕ್ಷಭೇದ ಮರೆತು ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣಗುರುಗಳ ಪಕ್ಷ ಎಂದು ಒಗ್ಗಟ್ಟಾದರೆ ಮಾತ್ರ ಮೂರ್ತೆದಾರಿಕೆ ಗೆ ಮತ್ತೆ ಜೀವ ಬರುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ.