ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಿನಕ್ಕೊಂದು ಅಚ್ಚರಿಯ ಸಂಗತಿಗಳು ಹೊರಬೀಳುತ್ತಿವೆ.
ಸಿಬಿಐ ಪ್ರಕರಣದ ತನಿಖೆಯನ್ನೂ ನಡೆಸುತ್ತಿದ್ದು, ತನಿಖಾ ಸಂಸ್ಥೆಗೆ ಹೊಸ ಸಿಸಿಟಿವಿ ದೃಶ್ಯಾವಳಿಯೊಂದು ಸಿಕ್ಕಿದ್ದು ಇದರಲ್ಲಿ ಆರೋಪಿ ಸಂಜಯ್ ರಾಯ್ ಕುರಿತ ಭಯಾನಕ ಮಾಹಿತಿಯೊಂದು ಲಭ್ಯವಾಗಿದೆ. ಸಿಬಿಐ ಮಾಹಿತಿಯ ಪ್ರಕಾರ, ಆರೋಪಿ ಸಂಜಯ್ ಅತ್ಯಾಚಾರ ಮತ್ತು ಕೊಲೆಗೆ ಒಂದು ದಿನ ಮೊದಲು ವೈದ್ಯೆಯ ಬಳಿಯೇ ಇದ್ದ. ಅಷ್ಟೇ ಅಲ್ಲದೆ ಆಕೆಯನ್ನು ದಿಟ್ಟಿಸಿಕೊಂಡು ನೋಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಸಿಸಿಟಿವಿ ದೃಶ್ಯದಲ್ಲಿ ಏನಿದೆ; ಸಂಜಯ್ ರಾವ್ ಕೃತ್ಯ ನಡೆಯುವ ಒಂದು ದಿನದ ಮೊದಲು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ವಾರ್ಡ್ ನಲ್ಲೆ ಇದ್ದ ಎನ್ನಲಾಗಿದ್ದು ಅದೇ ಸಮಯದಲ್ಲಿ ಟ್ರೈನಿ ವೈದ್ಯೆ ಸೇರಿದಂತೆ ಇತರ ನಾಲ್ವರು ಕಿರಿಯ ವೈದ್ಯರು ಸಹ ಅಲ್ಲಿದ್ದರು ಎಂದು ಸಿಸಿಟಿವಿ ದೃಶ್ಯಾವಳಿಗಳು ಖಚಿತಪಡಿಸಿದೆ. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ಸಂಜಯ್ ಟ್ರೈನಿ ವೈದ್ಯೆಯನ್ನೇ ದಿಟ್ಟಿಸಿಕೊಂಡು ನೋಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ನಾಲ್ವರು ಕಿರಿಯ ವೈದ್ಯರ ಹೇಳಿಕೆಗಳನ್ನು ಘಟನೆಗೆ ಸಂಬಂಧಿಸಿ ತನಿಖಾ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ, ಅಲ್ಲದೆ ಸಂತ್ರಸ್ತೆ ಸೆಮಿನಾರ್ ಹಾಲ್‌ಗೆ ಆಗಸ್ಟ್ 9 ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹೋಗಿದ್ದರು ಎಂಬುದಕ್ಕೆ ಪುರಾವೆಗಳಿವೆ. 2:30 ಕ್ಕೆ ವೈದ್ಯೆಯ ಜೊತೆ ಕೊನೆಯ ಬಾರಿ ಸಂಭಾಷಣೆ ನಡೆಸಿದ್ದು ಇದಾದ ಬಳಿಕ ಸಂತ್ರಸ್ತ ವೈದ್ಯೆ ರೆಸ್ಟ್ ರೂಂ ಗೆ ತೆರಳಿದ್ದಾಗಿ ಹೇಳಲಾಗಿದೆ.


